ಕನ್ನಡಪ್ರಭ ವಾರ್ತೆ ಭಟ್ಕಳ
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರದ ಉಸ್ತುವಾರಿ ಹೇಮಂತ ಗಾಂವಕರ್, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲ. ಸರ್ಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ತಮ್ಮ ಖುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಇವರಿಗೆ ರೈತರು ಮತ್ತು ಜನತೆ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು.ಭಾರತೀಯ ಕಿಸಾನ್ ಸಂಘದ ಪ್ರಮುಖ ಮಾಧವ ಹೆಗಡ ಮಾತನಾಡಿ, ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಬೇಕು. ರೈತರು ಸಂಕಷ್ಟದಲ್ಲಿದ್ದು, ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಘೋಷಿಸಬೇಕು. ರೈತರಿಗೆ ಸ್ಪಂದಿಸಲು ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಬೇಕು ಎಂದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಮಳೆ ಹೆಚ್ಚಾಗಿ ಮತ್ತು ವಿವಿಧ ಕಾರಣಕ್ಕಾಗಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಸಮರ್ಪಕ ಪರಿಹಾರ ನೀಡುತ್ತಿಲ್ಲ. ಸರಕಾರ ಅಭಿವೃದ್ಧಿ ಕೆಲಸ ಮಾಡದೇ ಖುರ್ಚಿ ಹೋರಾಟದಲ್ಲಿ ಮುಂದುವರಿದಿದೆ. ಸರ್ಕಾರ ರೈತರಿಗೆ ಸ್ಪಂದಿಸಬೇಕು. ಬೆಳೆ ಹಾನಿಗೆ ಸಂಬಂಧಿಸಿದಂತೆ ಹೊಸ ಮಾನದಂಡ ರೂಪಿಸಬೇಕು ಎಂದರು.ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮನವಿ ಓದಿ, ರಾಜ್ಯದ ರೈತರು ಬೆಳೆಹಾನಿಯಿಂದ ಮತ್ತು ಕಾಡು ಪ್ರಾಣಿಗಳ ಲೂಟಿಗೆ ತತ್ತರಿಸಿದ್ದು, ಸರಿಯಾದ ಪರಿಹಾರ ಕೊಡಬೇಕಾದ ಸರ್ಕಾರ ಖುರ್ಚಿ ಗಲಾಟೆಯಲ್ಲಿ ಮುಳುಗಿದೆ. ಇದೊಂದು ಬ್ರೇಕ್ ಫಾಸ್ಟ್ ಸರ್ಕಾರ ಎಂದು ಖ್ಯಾತಿ ಪಡೆದಿದೆ. ಅಡಕೆಯ ಎಲೆ ಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಡು ಪ್ರಾಣಿಗಳ ಲೂಟಿಗೆ ತೆಂಗು, ಬಾಳೆ ಮುಂತಾದ ಬೆಳೆಗಳು ನಾಶವಾಗಿದೆ. ವ್ಯಾಪಕ ಮಳೆಯಿಂದಾಗಿ ಅಡಕೆಗೆ ಕೊಳೆ ರೋಗ, ಮಲ್ಲಿಗೆ, ಶೇಂಗಾ, ಬತ್ತದ ಬೆಳೆಗಳು ನೆಲಕಚ್ಚಿದೆ. ಕಷ್ಟು ಪಟ್ಟು ಬೆಳೆದ ಬೆಳೆ ಹಾಳಾಗಿ ರೈತರು ಚಿಂತೆಗೀಡಾಗಿದ್ದು, ಸರ್ಕಾರ ರೈತರ ನೆರವಿಗಾಗಿ ಧಾವಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಎಸಿ ಅನುಪಸ್ಥಿತಿಯಲ್ಲಿ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಮನವಿ ಸ್ವೀಕರಿಸಿದರು. ಈ ಸಂದರ್ಭ ರೈತ ಮೋರ್ಚಾದ ವಿಷ್ಣು ಮೂರ್ತಿ ಹೆಗಡೆ, ನಾರಾಯಣ ಭಟ್ಟ, ನಾರಾಯಣ ಹೆಗಡೆ, ಪ್ರಮುಖರಾದ ಸುಬ್ರಾಯ ದೇವಾಡಿಗ, ರಾಜೇಶ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ, ಶ್ರೀನಿವಾಸ ನಾಯ್ಕ, ದಿನೇಶ ನಾಯ್ಕ, ವೆಂಕಟೇಶ ನಾಯ್ಕ, ರಾಘು ನಾಯ್ಕ, ಕೇಶವ ನಾಯ್ಕ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.