ಕನ್ನಡಪ್ರಭ ವಾರ್ತೆ ಮಳವಳ್ಳಿ
ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿರುವ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ಸೇರಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿ ಹಿರಿಯ ಮುಖಂಡ ಅಪ್ಪಾಜಿಗೌಡ ಮಾತನಾಡಿ, ಮದ್ದೂರಿನಲ್ಲಿ ಗಣೇಶಮೂರ್ತಿ ಮೆರವಣಿಗೆ ವೇಳೆ ಅನ್ಯ ಕೋಮಿನ ಯುವಕರು ಕಲ್ಲು ತೂರುವ ಮೂಲಕ ಅಟ್ಟಹಾಸ ಮೆರೆದಿರುವುದನ್ನು ಖಂಡಿಸಿದರು.ರಾಜ್ಯದ ಹಲವೆಡೆ ಹಿಂದೂಗಳ ಮೇಲೆ ಇಂತಹ ಹಲ್ಲೆ ದೌರ್ಜನ್ಯ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಹಿಂದೂಗಳ ಮೇಲಷ್ಟೇ ಅಲ್ಲದೇ, ಮೊನ್ನೆ ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆ ಕಿಟಕಿ ಬಾಗಿಲು ಗಾಜುಗಳನ್ನು ಹೊಡೆದು ಹಾಕಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಿಂದೂಗಳು ತಮ್ಮ ದೇವರ ಉತ್ಸವ ನಡೆಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಹಿಂದೂಗಳು ಜಾಗೃತರಾಗಬೇಕಿದೆ. ಕಲ್ಲು ತೋರಿದ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.ಮದ್ದೂರಿನಲ್ಲಿ ಸೋಮವಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು, ವೃದ್ಧರ ಮೇಲೆ ಲಾಠಿ ಚಾರ್ಚ್ ಮಾಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಪತ್ರವನ್ನು ಶಿರಸ್ತೇದಾರ್ ಗುರುಪ್ರಸಾದ್ ಅವರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಎಂ.ಎನ್. ಕೃಷ್ಣ, ರಾಜ್ಯ ಸಮಿತಿ ಸದಸ್ಯ ಮಧು ಗಂಗಾಧರ್, ಮುಖಂಡರಾದ ಅಪ್ಪಾಜಿಗೌಡ, ಕೆ.ಸಿ.ನಾಗೇಗೌಡ, ಶಿವಲಿಂಗಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್, ಪುರಸಭಾ ಸದಸ್ಯ ರವಿ, ಮುಖಂಡರಾದ ಅಶೋಕ್ ಕುಮಾರ್, ಎಚ್.ಬಸವರಾಜು, ಎನ್.ಕೆ.ಕುಮಾರ್, ವೇಣು, ಮಾದೇಶ, ಹನುಮಂತು, ಮೋಹನ್, ಕಾರ್ಯಕರ್ತರು ಪಾಲ್ಗೊಂಡಿದ್ದರು.