ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾವಣೆಗೊಂಡ ಕಾರ್ಯಕರ್ತರು ತಮಿಳುನಾಡು ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾಲ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕುಳಿತು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದರು.
ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕೊರತೆ ಇದೆ. ರಾಜ್ಯದ ರೈತರಿಗೆ ಬೆಳೆ ಬೆಳೆಯಲು ನೀರು ಕೊಡಲಾಗದೆ ಸಂಕಷ್ಟ ಅನುಭವಿಸುತ್ತಿದ್ದೇವೆ. ನೀರಿಲ್ಲದೆ ಬೆಳೆಗಳು ಒಣಗಿನಿಂತಿವೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶ ರಾಷ್ಟ್ರೀಯ ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಬರದ ಛಾಯೆ ಎದುರಾಗಿದೆ. ಕೆರೆ- ಕಟ್ಟೆಗಳು ಒಣಗುತ್ತಿವೆ. ಜನ-ಜಾನುವಾರುಗಳು ನೀರಿನ ಬವಣೆಯನ್ನು ಎದುರಿಸುತ್ತಿದ್ದರೂ ನೀರು ಬಿಡುಗಡೆ ಮಾಡಬೇಕೆಂಬ ಪ್ರಾಧಿಕಾರದ ಆದೇಶ ಕುರುಡುತನದ್ದಾಗಿದೆ ಎಂದು ದೂರಿದರು.
ರಾಜ್ಯಸರ್ಕಾರ ಜಿಲ್ಲೆಯ ರೈತರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು, ರಾಜ್ಯದ ನೀರಿನ ಪರಿಸ್ಥಿತಿ ಮತ್ತು ಬೆಳೆಗಳ ಅವಶ್ಯಕತೆಯನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರೈತಪರ ಸಂಘಟನೆಗಳ ಹೋರಾಟಗಾರರ ಅಭಿಪ್ರಾಯವನ್ನು ಆಲಿಸಿ ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕು, ಕಾವೇರಿ ವಿಚಾರದಲ್ಲಿ ಕಾವೇರಿ ಕಣಿವೆ ರೈತರ ಹಿತಾಸಕ್ತಿಯನ್ನು ದೃಢವಾಗಿ ಪ್ರತಿಪಾದಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಟೈರ್ ಇಟ್ಟು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಯತ್ನಿಸಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಟೈರ್‌ನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಟೈರ್ ಕಿತ್ತುಕೊಳ್ಳಲು ಯತ್ನಿಸಿದಾಗ ಪಿಎಸ್‌ಐ ಮಣಿ ಅವರ ಕೈಗೆ ಗಾಯವಾಯಿತು. ನಂತರ ಟೈರ್‌ನ್ನು ಕಿತ್ತುಕೊಂಡು ದೂರಕ್ಕೆ ಕೊಂಡೊಯ್ಯುವಲ್ಲಿ ಪೊಲೀಸರು ಯಶಸ್ವಿಯಾದರು.