ಗಂಗಾವತಿ: ನಗರ ಸೇರಿದಂತೆ ರಾಜ್ಯದ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವದನ್ನು ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಿಬಿಎಸ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆಡಳಿತ ಹಾಗೂ ಹಗರಣಗಳಲ್ಲೇ ಕಾಲ ಕಳೆಯುತ್ತಿದ್ದು, ನಮ್ಮ ಭಾಗದ ಅನ್ನದಾತರ ಜೀವನಾಡಿ ತುಂಗಭದ್ರಾ ಜಲಾಶದ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಅರೋಪಿಸಿದರು.
ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ, ಬೇರೆ ಪಕ್ಷದ ಶಾಸಕರಿಗೆ ₹25 ಕೋಟಿ ಅನುದಾನ ಎಂದು ಹೇಳಿ ತಾರತಮ್ಯ ಎಸಗಿದ್ದಾರೆ ಹಾಗೂ ರಾಜ್ಯದ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಿದ್ದರಿಂದ ಎಲ್ಲ ಪ್ರಮುಖ ಹಾಗೂ ಗ್ರಾಮೀಣ ರಸ್ತೆಗಳು ಗುಂಡಿಮಯವಾಗಿರುವದರಿಂದ ಪ್ರಮುಖ ಕೈಗಾರಿಕೆಗಳೆಲ್ಲ ಈಗಾಗಲೇ ರಾಜ್ಯಕ್ಕೆ ಬರಲು ಹಿಂಜರಿಯುತ್ತಿವೆ ಎಂದರು.ಮಾಜಿ ಸಂಸದ ಎಸ್.ಶಿವರಾಮಗೌಡ,ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ನಗರಸಭೆ ಅಧ್ಯಕ್ಷೆ ಹೀರಾಬಾಯಿ ಸಿಂಗ್, ಚಂದ್ರಶೇಖರ ಅಕ್ಕಿ, ರಾಚಪ್ಪ ಸಿದ್ದಾಪುರ, ಪಂಪಣ್ಣ ನಾಯಕ, ಮನೋಹರ ಗೌಡ ಹೇರೂರು, ಮಹಾಲಿಂಗಪ್ಪ ಬಿ, ಯಮನೂರ ಚೌಡ್ಕಿ, ದುರಗಪ್ಪ ದಳಪತಿ, ಪರುಶರಾಮ ಮಡ್ಡೇರ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.