ರೋಣ: ಪ್ರಸಕ್ತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ತೊಂದರೆ ಸರಿಪಡಿಸಿ ತಾಂತ್ರಿಕ ತೊಂದರೆ ನಿವಾರಣೆಯಾಗುವವರೆಗೂ ಸಮೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಬುಧವಾರ ತಹಸೀಲ್ದಾರ್ ನಾಗರಾಜ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರೋಣ ತಾಲೂಕು ಘಟಕದ ಅಧ್ಯಕ್ಷ ವೈ.ಡಿ. ಗಾಣಿಗೇರ ಅವರು, ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಪಕ್ಕದ ಸ್ಥಳಕ್ಕೆ ಹಾಕಲಾಗಿದ್ದು ಮತ್ತು ಸಮೀಕ್ಷೆಗೆ ಸಿದ್ಧತೆ ನಡೆಸಿರುವ ಸಿಬ್ಬಂದಿಗೆ ಮನೆ ಪಟ್ಟಿ ನೀಡದೇ ಇರುವುದು ಸಮೀಕ್ಷೆಯ ಹಿನ್ನಡೆಗೆ ಕಾರಣವಾಗಿದೆ. ಸಮೀಕ್ಷೆಗಾಗಿ ನೀಡಲಾಗಿರುವ ಮೊಬೈಲ್ ಆ್ಯಪ್ ಕೂಡ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ತಾಂತ್ರಿಕ ತೊಂದರೆಯಾಗಿದ್ದು, ಈ ಎಲ್ಲ ತೊಂದರೆಗಳನ್ನು ನಿವಾರಿಸುವವರೆಗೆ ಸಮೀಕ್ಷೆಯನ್ನು ಮುಂದುವಡುವಂತೆ ಒತ್ತಾಯಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರೋಣ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ದಾನಪ್ಪಗೌಡ್ರ ಮಾತನಾಡಿ, ಸಮೀಕ್ಷೆಗೆ ನೀಡಿರುವ ಯುಎಚ್ಐಡಿ ನಂಬರ್ ಮೇಲೆ ಮನೆಗಳನ್ನು ಗುರುತಿಸುವುದು ತೊಂದರೆಯಾಗಿದ್ದು, ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿರಿಯ ಶಿಕ್ಷಕರು ಹಾಗೂ ಮಹಿಳಾ ಶಿಕ್ಷಕಿಯರಿಗೆ ಬಹಳ ದೂರದ ಊರುಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ತೊಂದರೆ ಉಂಟಾಗಿದ್ದು, ಸದ್ಯ ದಸರಾ ಹಬ್ಬದ ವಾತಾವರಣ ಇರುವುದರಿಂದ ಹಬ್ಬಕ್ಕಾಗಿ ಊರಿಗೆ ತೆರಳಿದವರು ಮತ್ತೆ ಕೆಲವರು ಪ್ರವಾಸಕ್ಕೆ ತೆರಳಿರುವುದರಿಂದ ಹಲವು ಕಡೆ ಮಾಹಿತಿ ನೀಡಲು ಜನರು ಲಭ್ಯವಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ಸಮಸ್ಯೆಗಳನ್ನು ಪರಿಗಣಿಸಿ ಸ್ವಲ್ಪ ದಿನಗಳ ಮಟ್ಟಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಎಸ್.ಬಿ. ಕಿತ್ತಲಿ, ಸಿ.ಕೆ. ಕೇಸರಿ, ಎಂ.ಎಸ್. ಹೊಸಮನಿ, ಬಿ.ಎನ್. ಖ್ಯಾತನಗೌಡ್ರ, ಮಾಳೇಕರ, ಎಸ್.ಎಚ್. ಯಲಿಗಾರ, ಆರ್.ಎಂ. ಇಟಗಿ, ಪಿ.ಎಚ್. ವಾಲ್ಮೀಕಿ, ಎಸ್.ಬಿ. ಹಿರೇಮಠ, ವಿಶ್ವನಾಥ ಕಮ್ಮಾರ, ಎಂ.ಬಿ. ಗಿರಿಯಪ್ಪಗೌಡ್ರ, ಬಿ.ಸಿ. ಗುಳೇದ, ಎಸ್.ಕೆ. ಆಡೀನ, ಎಸ್.ಟಿ. ವಾಲ್ಮೀಕಿ ಸೇರಿದಂತೆ ಇತರರು ಇದ್ದರು.