ಗಜೇಂದ್ರಗಡ: ರಸ್ತೆ ಗುಂಡಿಗಳನ್ನು ಮುಚ್ಚಲಾಗದ ದುಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿದ್ದು, ರಸ್ತೆಗಳು ಸರಿಯಾಗದಿದ್ದರೆ ಗ್ರಾಮಗಳ ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಎಚ್ಚರಿಸಿದರು.
ಗಜೇಂದ್ರಗಡ- ಗದಗ ರಸ್ತೆ ಸೇರಿ ತಾಲೂಕಿನಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿ ಬಿಜೆಪಿಯಿಂದ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಮತಕ್ಷೇತ್ರ ಸೇರಿ ರಾಜ್ಯದ ರಾಜ್ಯಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಆಗದ ದುಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ನಿಂತಿದೆ. ಪರಿಣಾಮ ರಸ್ತೆಗಳಲ್ಲಿ ವಾಹನಗಳಲ್ಲ ಜನರು ಸಹ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಜವಾಬ್ದಾರಿಯಿಲ್ಲ ಎನ್ನುವುದಕಿಂತ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಪರಿಣಾಮ ಮುಂದಿನ ದಿನಗಳಲ್ಲಿ ನೌಕರರಿಗೆ ಹಣ ಪಾವತಿಸಲು ಸರ್ಕಾರ ಪರದಾಡಲಿದೆ. ರಸ್ತೆ ದುರಸ್ತಿಗೆ ಸರ್ಕಾರ ಮುಂದಿನ ದಿನಗಳಲ್ಲಿ ಗ್ರಾಮಗಳನ್ನು ಬಂದ್ ಮಾಡಿ ಪಕ್ಷದಿಂದ ಪ್ರತಿಭಟಿಸಬೇಕಾಗುತ್ತದೆ ಎಂದರು.
ಮುಖಂಡ ಶಿವಾನಂದ ಮಠದ ಮಾತನಾಡಿ, ಕಳಕಪ್ಪ ಬಂಡಿ ಅವರು ಅಧಿಕಾರ ಅವಧಿಯಲ್ಲಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ರಸ್ತೆ ನಿರ್ಮಾಣಗಳ ಕಾರ್ಯವನ್ನು ಮಾಡಿದ್ದರು. ಪರಿಣಾಮ ಮತಕ್ಷೇತ್ರದ ಪ್ರತಿ ಗ್ರಾಮದ ಸಂಪರ್ಕ ರಸ್ತೆಗಳು ಸುಸ್ಥಿಯಿಲ್ಲಿದ್ದವು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ದೂರದ ಮಾತು. ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ಹಣವಿಲ್ಲದ್ದೂ ದುರ್ದೈವ. ಪರಿಣಾಮ ರಾಜ್ಯದಲ್ಲಿ ಚುನಾವಣೆ ಘೋಷಣೆಯಾದರೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪೂರ ಮಾತನಾಡಿ, ಮತಕ್ಷೇತ್ರದ ಗುಳಗುಳಿ, ಯರೇಕುರಬನಾಳ, ಅಬ್ಬಿಗೇರಿ ಸೇರಿ ಗ್ರಾಮೀಣ ಭಾಗದ ರಸ್ತೆಗಳನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಕಳಕಪ್ಪ ಬಂಡಿ ಅವರು ರಸ್ತೆಗಳ ನಿರ್ಮಾಣದ ಜತೆಗೆ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಈಗ ರಸ್ತೆಯಲ್ಲಿ ಹೊಂಡದಂತೆ ನೀರು ನಿಲ್ಲುತ್ತಿದ್ದರೆ, ಇನ್ನೂ ಕೆಲವು ಗ್ರಾಮದ ರಸ್ತೆಗಳು ಮಾಯವಾಗಿವೆ. ಸರ್ಕಾರಕ್ಕೆ ತೆರಿಗೆ ಕಟ್ಟಿದರೂ ಗುಂಡಿಗಳು ಬಿದ್ದ ರಸ್ತೆಯಲ್ಲಿ ಸಂಚರಿಸಬೇಕಿದೆ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿದ್ದರೆ ಪ್ರತಿಭಟಿಸುತ್ತೇವೆ ಎಂದರು.ಈ ವೇಳೆ ಮುತ್ತಣ್ಣ ಕಡಗದ, ರಾಜೇಂದ್ರ ಘೋರ್ಪಡೆ, ಶಿವಬಸಪ್ಪ ಬೆಲ್ಲದ, ಅಶೋಕ ನವಲಗುಂದ, ವೀರಪ್ಪ ಪಟ್ಟಣಶೆಟ್ಟಿ, ಉಮೇಶ ಚನ್ನು ಪಾಟೀಲ, ಭಾಸ್ಕರ ರಾಯಬಾಗಿ, ಶಂಕರ ಸವಣೂರ, ಮುದಿಯಪ್ಪ ಕರಡಿ, ಮಲ್ಲು ಮಾದರ, ದಾನು ರಾಠೋಡ, ಪರಶುರಾಮ ಚಿಲ್‌ಝರಿ, ಬುಡ್ಡಪ್ಪ ಮೂಲಿಮನಿ, ಡಿ.ಜಿ. ಕಟ್ಟಿಮನಿ, ಬಾಳು ಬೋಸ್ಲೆ ಇತರರು ಇದ್ದರು.