ಲಕ್ಷ್ಮೇಶ್ವರ: ಪಟ್ಟಣದ ಕಲಾಂ ನಗರದ ಹತ್ತಿರವಿರುವ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ವಿದ್ಯಾಸಂಸ್ಥೆಯ ಡಾ. ಬಿ.ಆರ್. ಅಂಬೇಡ್ಕರ್ ಅನುದಾನಿತ ಪ್ರೌಢಶಾಲೆಯ ಬಳಿ ಚರಂಡಿ ನೀರು ತುಂಬಿಕೊಳ್ಳುತ್ತಿದ್ದು, ಪುರಸಭೆ ನಿರ್ಲಕ್ಷ್ಯ ತಾಳುತ್ತಿರುವುದಕ್ಕೆ ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಅಲ್ಕೋಡ ಅವರು ಆಕ್ರೋಶ ವ್ಯಕ್ತಪಡಿಸಿ, ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಈ ವೇಳೆ ಅವರು ಮಾತನಾಡಿದ ಅವರು, ಕಳೆದ ೩-೪ ವರ್ಷಗಳಿಂದ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿನ ತಟ್ಟಿ ಬಡಾವಣೆಯಲ್ಲಿನ ಬಸವೇಶ್ವರ ನಗರ, ಇಂದಿರಾನಗರ ಹಾಗೂ ಅಬ್ದುಲ್ ಕಲಾಂ ನಗರದ ಚರಂಡಿ ನೀರು ಶಾಲೆಯ ಆವರಣಕ್ಕೆ ನುಗ್ಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದರ ವಾಸನೆಯಿಂದ ಮಕ್ಕಳು ಊಟ ಮಾಡಲು ಸಹ ಹಿಂಜರಿಯುವಂತಾಗಿದೆ.
ಈ ಗಲೀಜು ನೀರಿನಿಂದ ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಕುರಿತಂತೆ ಪುರಸಭೆಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಶಾಲೆಯ ಮಕ್ಕಳಿಗೆ ಶುದ್ಧ ವಾತಾವರಣ ಇರಬೇಕು ಎನ್ನುವ ಸರ್ಕಾರದ ನೀತಿಯಾಗಿದೆ. ಅದನ್ನು ಇಲ್ಲಿ ಸಂಪೂರ್ಣವಾಗಿ ಧಿಕ್ಕರಿಸಲಾಗಿದೆ. ಬಡಾವಣೆಯ ನಿರ್ಮಿಸಿರುವ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ನೀರು ಹರಿದು ಹೋಗುವ ಮಾರ್ಗವನ್ನೆ ಸರಿಯಾಗಿ ಮಾಡಿಲ್ಲ. ಹೊಸ ಬಡಾವಣೆ ನಿರ್ಮಾಣ ಮಾಡುವಾಗ ಅಧಿಕಾರಿಗಳು ಕಣ್ಮುಚ್ಚಿ ಪರವಾನಗಿ ನೀಡಿದ್ದಾರೆ. ಚರಂಡಿ ನೀರು ಹರಿದು ಶಾಲೆಯ ಆವರಣದೊಳಗೆ ನುಗ್ಗುತ್ತಿದೆ.