ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾ ವರ್ತನೆ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jan 25, 2026, 01:15 AM IST
4 | Kannada Prabha

ಸಾರಾಂಶ

ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋತ್ ಅವರು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿ ತೆರಳುತ್ತಿದ್ದ ವೇಳೆ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾ ವರ್ತನೆ ತೋರಿದ್ದಾರೆ. ಸಂವಿಧಾನ ರಕ್ಷಕರು ಎಂದು ಬಿಂಬಿಸಿಕೊಳ್ಳುವವರು ಈ ರೀತಿ ವರ್ತಿಸಿ ಕೇವಲ ಸದನಕ್ಕೆ ಮಾತ್ರವಲ್ಲದೆ ಸಂವಿಧಾನಕ್ಕೂ ಅಪಮಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾ ವರ್ತನೆ ತೋರಿರುವುದನ್ನು ಖಂಡಿಸಿ ಹಾಗೂ ರಾಜ್ಯಪಾಲರನ್ನು ಅಡ್ಡಗಟ್ಟಿದ ಶಾಸಕರನ್ನು ವಜಾಗೊಳಿಸಲು ಆಗ್ರಹಿಸಿ ಬಿಜೆಪಿ ನಗರ ಮತ್ತು ಜಿಲ್ಲಾ ಯುವ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ನಗದರ ರಾಮಸ್ವಾಮಿ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿದರು.

ದಲಿತ ರಾಜ್ಯಪಾಲರನ್ನು ಅವಮಾನಿಸಿದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ದಲಿತ ವಿರೋಧಿ ಕಾಂಗ್ರೆಸ್‌ ಗೆ ಧಿಕ್ಕಾರ, ರೌಡಿ ಕೊತ್ವಾಲ್ ಶಿಷ್ಯ ಹರಿಪ್ರಸಾದ್‌ ಗೆ ಧಿಕ್ಕಾರ, ಕಾಂಗ್ರೆಸ್ ಗೂಂಡಾಗಳಿಗೆ ಧಿಕ್ಕಾರ, ಹರಿಪ್ರಸಾದ್ ಹಠಾವೋ ಕರ್ನಾಟಕ ಬಚಾವೋ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋತ್ ಅವರು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿ ತೆರಳುತ್ತಿದ್ದ ವೇಳೆ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಅಡ್ಡಗಟ್ಟಿ ಗೂಂಡಾ ವರ್ತನೆ ತೋರಿದ್ದಾರೆ. ಸಂವಿಧಾನ ರಕ್ಷಕರು ಎಂದು ಬಿಂಬಿಸಿಕೊಳ್ಳುವವರು ಈ ರೀತಿ ವರ್ತಿಸಿ ಕೇವಲ ಸದನಕ್ಕೆ ಮಾತ್ರವಲ್ಲದೆ ಸಂವಿಧಾನಕ್ಕೂ ಅಪಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಈ ವೇಳೆ ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಅವರನ್ನು ತಡೆದು ಗೂಂಡಾಗಳಂತೆ ವರ್ತಿಸಿರುವುದಲ್ಲದೆ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಬಿ.ಕೆ. ಹರಿಪ್ರಸಾದ್, ಬಾಲಕೃಷ್ಣ ಸೇರಿದಂತೆ ಕಾಂಗ್ರೆಸ್‌ ನ ಹಲವು ಶಾಸಕರು ರಾಜ್ಯಪಾಲರ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ. ಹೀಗಾಗಿ, ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಗೂಂಡಾ ಶಾಸಕರನ್ನು ವಜಾಗೊಳಿಸಬೇಕು. ಸಂವಿಧಾನಕ್ಕೆ ಅಪಮಾನ ಮಾಡಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.

ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ ಮಾತನಾಡಿ, ದುರ್ವತನೆ ತೋರಿದ ಶಾಸಕರು ರಾಜ್ಯಪಾಲ ಕ್ಷಮೆ ಕೋರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್.ಸುಬ್ಬಣ್ಣ, ಮಾಜಿ ಮೇಯರ್ ಶಿವಕುಮಾರ್, ಪದಾಧಿಕಾರಿಗಳಾದ ಸಿ.ಕೆ.ರುದ್ರಮೂರ್ತಿ, ಪರಿಕ್ಷೀತ್ ರಾಜೇ ಅರಸ್, ಎನ್. ಅರುಣ್ ಕುಮಾರ್ ಗೌಡ, ಕಿರಣ್ ಜಯರಾಮೇಗೌಡ, ಎಲ್.ಅರ್. ಕೃಷ್ಣಪ್ಪ ಗೌಡ, ಟಿ. ರವಿ, ದಿನೇಶ್ ಗೌಡ, ಮುಖಂಡರಾದ ಮಿರ್ಲೆ ಶ್ರೀನಿವಾಸ್ ಗೌಡ, ಸೋಮಶೇಖರ್, ಚಂದ್ರಶೇಖರ ದಾರೀಪುರ, ಕಾರ್ತಿಕ್ ಮರಿಯಪ್ಪ, ಗೋಕುಲ್ ಗೋವರ್ಧನ್, ಜೋಗಿ ಮಂಜು, ರಾಕೇಶ್ ಭಟ್, ಸೋಮಸುಂದರ್, ಬಿ.ಎಂ. ಸಂತೋಷ್ ಕುಮಾರ್, ಲೋಹಿತ್ ದೊರೆಸ್ವಾಮಿ, ಶಿವಕುಮಾರ್, ಮೋಹನ್ ಕುಮಾರ್, ಪ್ರದೀಪ್, ರಾಜೇಶ್, ಪರಶಿವಮೂರ್ತಿ, ಶಾಂತಮ್ಮ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!