ಫೈರಿಂಗ್‌ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : May 28, 2026, 02:00 AM IST
ಧಾರವಾಡದಲ್ಲಿ ನಡೆಯುತ್ತಿರುವ ಫೈರಿಂಗ್‌ ಸಂಸ್ಕೃತಿ ವಿರೋಧಿಸಿ ಬುಧವಾರ ಶಾಸಕ ಮಹೇಶ ಟೆಂಗಿನಕಾಯಿ ಬಿಜೆಪಿ ನೇತೃತ್ವದಲ್ಲಿ ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಧಾರವಾಡದಲ್ಲಿ ನಡೆದ ಫೈರಿಂಗ್ ಇಡೀ ದೇಶಕ್ಕೆ ಗೊತ್ತಿದ್ದರೂ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಘಟನೆ ಬಗ್ಗೆ ತಿಳಿದುಕೊಳ್ಳುತ್ತೇವೆ ಹಾಗೂ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಾಕ್ಷಿಗಳು ದೊರೆತರೂ ಆರೋಪಿಗಳ ವಿರುದ್ಧ ಕಠಿಣ ಕ್ರಮವಹಿಸುತ್ತಿಲ್ಲ.

ಹುಬ್ಬಳ್ಳಿ:

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಧಾರವಾಡದಲ್ಲಿ ಫೈರಿಂಗ್ ಸಂಸ್ಕೃತಿ ಆರಂಭವಾಗಿದೆ ಎಂದು ಆರೋಪಿಸಿ ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ. ಜಿ. ಪರಮೇಶ್ವರ ಹಾಗೂ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಜಿಸಿದರು. ಜತೆಗೆ ಪೊಲೀಸ್‌ ಆಯುಕ್ತರನ್ನು ಕೂಡಲೇ ವರ್ಗಾವಣೆಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರದಲ್ಲಿ ಭೂ ಮಾಫಿಯಾ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವುದನ್ನು ನೋಡಿದರೆ, ಪೊಲೀಸ್ ಆಯುಕ್ತರೆ ಈ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿವೆ ಎಂದು ಆರೋಪಿಸಿದರು.

ಧಾರವಾಡದಲ್ಲಿ ನಡೆದ ಫೈರಿಂಗ್ ಇಡೀ ದೇಶಕ್ಕೆ ಗೊತ್ತಿದ್ದರೂ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಘಟನೆ ಬಗ್ಗೆ ತಿಳಿದುಕೊಳ್ಳುತ್ತೇವೆ ಹಾಗೂ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಾಕ್ಷಿಗಳು ದೊರೆತರೂ ಆರೋಪಿಗಳ ವಿರುದ್ಧ ಕಠಿಣ ಕ್ರಮವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹು-ಧಾ ಮಹಾನಗರದಲ್ಲಿ ನಡೆದ ಬಹುತೇಕ ಪ್ರಕರಣಗಳು ಸಿಸಿಬಿ ನಿರ್ವಹಿಸುತ್ತಿದ್ದು, ಅವುಗಳನ್ನು ಸಿಒಡಿಗೆ ನೀಡಬೇಕು. ಆರೋಪಿಗಳ ಮೇಲೆ ಮೂರು ನಾಲ್ಕು ಪ್ರಕರಣಗಳಿದ್ದರೂ ಅವರ ಮೇಲೆ ಕ್ರಮವಿಲ್ಲ. ಪೊಲೀಸ್ ಆಯುಕ್ತರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸು ವರೆಗೂ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ ಮಾತನಾಡಿ, ಹು-ಧಾ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದರೂ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಪೊಲೀಸ್‌ ಆಯುಕ್ತರ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಅವರನ್ನು ಬೇರೆಡೆ ವರ್ಗಾವಣೆಗೊಳಿಸಿ ದಕ್ಷ ಅಧಿಕಾರಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ವಸಂತ ನಾಡಜೋಶಿ, ಶಿವು ಮೆಣಸಿನಕಾಯಿ, ರೂಪಾ ಶೆಟ್ಟಿ, ಮೀನಾಕ್ಷಿ ವಂಟಮುರಿ, ವೀಣಾ ಭರದ್ವಾಡ, ವೆಂಕಟೇಶ ಕಾಟವೆ, ಭೀರಪ್ಪ ಖಂಡೇಕರ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ಶಂಕರ ಪಾಟೀಲ, ಪ್ರವೀಣ ಹುರಳಿ, ಸಂತೋಷ ಅರಕೇರಿ, ರಾಜು ಕೋರ್ಯಾಣಮಠ, ಸೀಮಾ ಲದವಾ, ಪ್ರೀತಂ ಅರಕೇರಿ, ಪ್ರವೀಣ ಕುಬಸದ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಯಶಸ್ವಿಗೊಳಿಸಿ: ಡಾ. ದುರಗೇಶ್ ಕೆ.ಆರ್.
ಗೋ ಹತ್ಯೆ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ