ಕನ್ನಡಪ್ರಭ ವಾರ್ತೆ ಮುಧೋಳ
ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮತ್ತು ನಗರ ಮಂಡಲ ಮುಧೋಳ ವತಿಯಿಂದ ಮಂಗಳವಾರ ಮುಧೋಳ ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ವೇಳೆ ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಮಾತನಾಡಿ, ಮುಧೋಳ ತಾಲೂಕಿಗೆ ಪೂರ್ಣಾವಧಿ ತಹಸೀಲ್ದಾರರಿಲ್ಲದ ಕಾರಣ ಸಾರ್ವಜನಿಕರು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ರೈತರ ಕುಂದುಕೊರತೆ ಪರಿಹಾರಕ್ಕೆ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ವಾರದಲ್ಲಿ ಮೂರು ದಿನ ಜಮಖಂಡಿ ತಹಸೀಲ್ದಾರರು ಬಂದು ಹೋಗುವ ಪರಿಪಾಠ ಇರುವುದರಿಂದ ನಾಲ್ಕು ತಿಂಗಳಿಂದ ಮುಧೋಳ ತಾಲೂಕಿನ ಸಾರ್ವಜನಿಕರು, ರೈತರು ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಹೇಳಿದರು.
ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಾಲೂಕಿನ ಜನರ ಹಾಗೂ ರೈತರ ಮತ್ತು ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿವಹಿಸದೇ ತಮ್ಮ ಇಲಾಖೆಯ ಭ್ರಷ್ಟಾಚಾರ ಮುಚ್ಚಿ ಹಾಕುವುದರಲ್ಲಿ ತಲ್ಲೀನರಾಗಿದ್ದಾರೆ. ಆದಕಾರಣ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ತಾವಾದರೂ ಮುಧೋಳ ತಾಲೂಕಿಗೆ ಪೂರ್ಣಾವಧಿ ತಹಸೀಲ್ದಾರರನ್ನು ನೇಮಕ ಮಾಡಿ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಬಿಜೆಪಿ ವತಿಯಿಂದ ತಾಲೂಕಿನಾದ್ಯಂತ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅರುಣ ಗೋವಿಂದ ಕಾರಜೋಳ, ಈ ಹಿಂದೆ ನಮ್ಮ ತಂದೆ ಶಾಸಕರಿದ್ದಾಗ ಖುಷಿಯಿಂದ ಅಧಿಕಾರಿಗಳು ಇಲ್ಲಿಗೆ ಬರುತ್ತಿದ್ದರು. ಆದರೆ ಈಗೇಕೆ ಬರುತ್ತಿಲ್ಲವೆಂದು ಪ್ರಶ್ನಿಸಿದರು.ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಣ್ಣ ಕಾತರಕಿ ಮುಖಂಡರಾದ ಕಲ್ಲಪ್ಪ ಸಬರದ, ಸದಪ್ಪ ತೇಲಿ, ಅನಂತ ಘೋರ್ಪಡೆ, ಶ್ರೀಕಾಂತ ಗುಜ್ಜನವರ, ಡಾ.ರವಿ ನಂದಗಾಂವ, ಸೋನಾಪ್ಪಿ ಕುಲಕರ್ಣಿ, ಶ್ರೀಶೈಲ ಚಿನ್ನಣ್ಣವರ, ಕೆ.ಎಸ್. ಹಿರೇಮಠ, ಅನೂಪ ಚವ್ಹಾನ, ಬಸು ದಾಸರ, ರಾಜೇಂದ್ರ ಟಂಕಸಾಲಿ, ಶ್ರೀಶೈಲಗೌಡ ಪಾಟೀಲ, ನಾಗಪ್ಪ ಅಂಬಿ, ಸುರೇಶ ಅಕ್ಕಿಮರಡಿ, ಸುನೀಲ ಕಂಬೋಗಿ, ಶಂಕರಗೌಡ ಪಾಟೀಲ, ಆನಂದ ಹವಳಖೋಡ, ಪ್ರದೀಪ ನಿಂಬಾಳಕರ, ಕೃಷ್ಣಾ ಕಟ್ಟಿಮನಿ, ಪ್ರಜ್ವಲ ಚಿಮ್ಮಡ, ಸುಶೀಲಾ, ಗುರುಪಾದ ಕುಳಲಿ, ಗಣೇಶ ರಾಠೋಡ, ವನಜಾಕ್ಷಿ ಮಂಟೂರ ಉಪಸ್ಥಿತರಿದ್ದು ಮಾತನಾಡಿ, ಏಷ್ಯಾದಲ್ಲಿ ಅತಿ ಹೆಚ್ಚು ಕಂದಾಯ ಬರುವ ತಾಲೂಕಿಗೆ ತಹಸೀಲ್ದಾರ್ ಇಲ್ಲ ಎನ್ನುವುದು ನಾಚಿಗೇಡಿನ ಸಂಗತಿ. ಇದರಿಂದ ಕಚೇರಿಯಲ್ಲಿ ಸಮರ್ಪಕ ಕೆಲಸಗಳು ಆಗುತ್ತಿಲ್ಲ, ಎಲ್ಲಡೆ ಬ್ರಷ್ಟಾಚಾರ ತಾಂಡವಾಡುತ್ತಿವೆ, ಅನುದಾನವಿಲ್ಲದೆ ತಾಲೂಕಿನಲ್ಲಿ ಒಂದು ಕೆಲಸವಾಗುತ್ತಿಲ್ಲ, ಜನರ ಮುಂದೆ ಕಣ್ಣೀರು ಹಾಕಿ ಗೆದ್ದ ನಂತರ ಮತದಾರರಿಗೆ ಕಣ್ಣೀರು ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವಾರದಲ್ಲಿ ತಹಸೀಲ್ದಾರ್ ನೇಮಕ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ ಪತ್ರ ಸ್ವಿಕರಿಸಿ ವಾರಾಂತ್ಯದಲ್ಲಿ ತಹಸೀಲ್ದಾರ ನೇಮಕವಾಗುತ್ತಾರೆಂದು ಹೇಳಿದರು.