ದರ್ಗಾ ರಸ್ತೆಗಾಗಿ ಹುಲಿಕೆರೆ ಒತ್ತುವರಿ, ತೆರವಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Feb 22, 2026, 02:30 AM IST
21ಕೆಪಿಎಲ್23 ಕೊಪ್ಪಳ ಹುಲಿಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದು.21ಕೆಪಿಎಲ್24 ಒತ್ತುವರಿಯನ್ನು ತೆರವು ಮಾಡುತ್ತಿರುವುದು. | Kannada Prabha

ಸಾರಾಂಶ

ಶಿವರಾತ್ರೇಶ್ವರ ದೇವಸ್ಥಾನ ಮತ್ತು ದರ್ಗಾಕ್ಕಾಗಿ ತೆರಳುವುದಕ್ಕಾಗಿ ರಸ್ತೆ ನಿರ್ಮಾಣ ಮಾಡುವುದಾಗಿ ಸಮಜಾಯಿಸಿ ನೀಡಲು ಬಂದರೂ ಪ್ರತಿಭಟನಾಕಾರರು ಪ್ರತಿಭಟನೆ ಹಿಂದೆ ಪಡೆಯಲಿಲ್ಲ

ಕೊಪ್ಪಳ: ಹುಲಿಕೆರೆ ಒತ್ತುವರಿ ಮಾಡಿ, ದರ್ಗಾಕ್ಕೆ ರಸ್ತೆ ನಿರ್ಮಾಣ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಶನಿವಾರ ಪ್ರತಿಭಟನೆ ಮಾಡಿದ್ದರಿಂದ ಜಿಲ್ಲಾಡಳಿತ ರಸ್ತೆ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ.

ಹುಲಿಕೆರೆಯಲ್ಲಿದ್ದ ನೀರನ್ನು ತೆರವು ಮಾಡಿ, ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡುವ ಕಾರ್ಯ ಕಳೆದೆರಡು ದಿನಗಳಿಂದ ನಡೆದಿತ್ತು. ಈ ಮಾಹಿತಿ ತಿಳಿದ ಬಿಜೆಪಿ ಮುಖಂಡರು ಕೆರೆಯ ದಡ, ಅದರಲ್ಲೂ ಒತ್ತುವರಿ ಮಾಡಿ ರಸ್ತೆ ಮಾಡಿದ್ದ ಸ್ಥಳದಲ್ಲಿಯೇ ಪ್ರತಿಭಟನೆ ಮಾಡಿದ್ದರು. ಇದು ಪರಿಸ್ಥಿತಿ ಕೈ ಮಿರುವ ಹಂತಕ್ಕೆ ತೆರಳುವಂತಾಯಿತು.

ನಗರಸಭೆ ಪೌರಾಯುಕ್ತ ವೆಂಕೇಶ, ಕೊಪ್ಪಳ ನಗರ ಠಾಣೆಯ ಪಿಐ ಜಯಪ್ರಕಾಶ, ಡಿವೈಎಸ್ಪಿ ಮುತ್ತಣ್ಣ ಸವರಗೋಳ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಮಾಡುವ ಪ್ರಯತ್ನ ಮಾಡಿದರು. ಆದರೆ, ಹೋರಾಟಗಾರರು ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಕದಲುವುದಿಲ್ಲ. ಕೆರೆ ಒತ್ತುವರಿ ಮಾಡುವುದು ಯಾವ ನ್ಯಾಯ.ಕೂಡಲೇ ಅಕ್ರಮವಾಗಿ ನಿರ್ಮಾಣ ಮಾಡಿರುವ ರಸ್ತೆ ತೆರವು ಮಾಡುವಂತೆ ಆಗ್ರಹಿಸಿದರು.

ಶಿವರಾತ್ರೇಶ್ವರ ದೇವಸ್ಥಾನ ಮತ್ತು ದರ್ಗಾಕ್ಕಾಗಿ ತೆರಳುವುದಕ್ಕಾಗಿ ರಸ್ತೆ ನಿರ್ಮಾಣ ಮಾಡುವುದಾಗಿ ಸಮಜಾಯಿಸಿ ನೀಡಲು ಬಂದರೂ ಪ್ರತಿಭಟನಾಕಾರರು ಪ್ರತಿಭಟನೆ ಹಿಂದೆ ಪಡೆಯಲಿಲ್ಲ.

ಈ ನಡುವೆ ರಸ್ತೆ ನಿರ್ಮಾಣ ಮಾಡುವುದಕ್ಕೆ ಹೇಳಿದ್ದೇ ಸಂಸದ ರಾಜಶೇಖರ ಹಿಟ್ನಾಳ ಎನ್ನುವ ಮಾಹಿತಿ ಹರಿದಾಡಿತು. ಇದನ್ನು ತಿಳಿದ ವಿಪ ಸದಸ್ಯೆ ಹೇಮಲತಾ ನಾಯಕ ತಕ್ಷಣ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಕರೆ ಮಾಡಿ ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡುವುದಕ್ಕೆ ನೀವು ಹೇಳಿದ್ದಿರಾ, ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುವುದಕ್ಕೆ ಅನುದಾನ ನೀಡಿದ್ದಿರಾ ಎಂದು ಪ್ರಶ್ನೆ ಮಾಡಿದರು.

ಆಗ ಸಂಸದ ರಾಜಶೇಖರ ಹಿಟ್ನಾಳ, ಕೆರೆಯಲ್ಲಿ ನಿರ್ಮಾಣ ಮಾಡುತ್ತಾರೆ, ಒತ್ತುವರಿಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಶಿವರಾತ್ರೇಶ್ವರ ದೇವಸ್ಥಾನ ಸಮಿತಿಯವರು ಹಾಗೂ ದರ್ಗಾ ಸಮಿತಿಯವರು ಒಗ್ಗಟ್ಟಾಗಿ ಬಂದಿದ್ದರು. ದರ್ಗಾಕ್ಕೆ ರಸ್ತೆ ಸಮಸ್ಯೆಯಾಗಿದೆ. ಹೀಗಾಗಿ,ನಿರ್ಮಾಣ ಮಾಡಿಕೊಳ್ಳುತ್ತೇವೆ ಎಂದಾಗ ಇಬ್ಬರು ಒಪ್ಪುವುದಾದರೆ ಮಾಡಿಕೊಳ್ಳಿ, ಅದಕ್ಕೆ ಅನುದಾನ ಕೊಡಲು ಬರುವುದಿಲ್ಲ ಎಂದು ಹೇಳಿದ್ದೇನೆ ಎಂದು ಹೇಳಿದರು.

ಹಾಗಾದರೆ ನೀವು ಸ್ಥಳಕ್ಕೆ ತಕ್ಷಣ ಬನ್ನಿ, ಒತ್ತುವರಿ ಮಾಡಿ, ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ನೋಡಿ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಆಗ್ರಹಿಸಿದರೂ ಸಂಸದ ರಾಜಶೇಖರ ಹಿಟ್ನಾಳ ಮಾತ್ರ ಸ್ಥಳಕ್ಕೆ ಆಗಮಿಸಲೇ ಇಲ್ಲ.

ರಸ್ತೆ ತೆರವು: ಕೊನೆಗೂ ಜಿಲ್ಲಾಡಳಿತ ಅಕ್ರಮವಾಗಿ ಕೆರೆಯಲ್ಲಿ ನಿರ್ಮಾಣ ಮಾಡಿರುವ ರಸ್ತೆ ತೆರವು ಮಾಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತಲ್ಲದೆ, ತಕ್ಷಣ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಮೂರು ದಿನದೊಳಗಾಗಿ ರಸ್ತೆ ತೆರವು ಮಾಡುವುದಾಗಿ ಹೇಳಿದ್ದರಿಂದ ಬಿಜೆಪಿ ಮುಖಂಡರು ಪ್ರತಿಭಟನೆ ಕೈಬಿಟ್ಟರು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ, ಬಿಜೆಪಿ ಎಸ್ಸಿಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಸುನಿಲ ಹೆಸರೂರು, ಸೋಮಣ್ಣ ಹಳ್ಳಿ, ನೀಲಕಂಠಯ್ಯ ಹಿರೇಮಠ, ಮಹಾಲಕ್ಷ್ಮಿ ಕಂದಾರಿ, ಉಮೇಶ ಕುರಡೇಕರ, ಚನ್ನಬಸವ ಗಾಳಿ, ಮಹೇಶ ಅಂಗಡಿ, ರಾಜು ಬಿಸರಳ್ಳಿ, ಬಸವರಾಜ ಗಾಳಿ, ಶರಣಗೌಡ ಪಾಟೀಲ್, ಮಂಜುನಾಥ ಮುಸ್ಲಾಪುರ ಇದ್ದರು.

ಶಿವರಾತ್ರೇಶ್ವರ ದೇವಸ್ಥಾನ ಸಮಿತಿ ಮತ್ತು ದರ್ಗಾ ಸಮಿತಿ ಒಗ್ಗೂಡಿ ಬಂದು,ರಸ್ತೆ ನಿರ್ಮಾಣ ಮಾಡಿಕೊಳ್ಳುವುದಾಗಿ ಕೇಳಿಕೊಂಡಿದ್ದರಿಂದ ಮಾಡಿಕೊಳ್ಳುವಂತೆ ಹೇಳಿದ್ದೇನೆ. ಒತ್ತುವರಿಯಾಗಿರುವ ಮಾಹಿತಿ ನನಗೆ ಇಲ್ಲ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.

ಕೆರೆ ಒತ್ತುವರಿ ಮಾಡಿ, ರಸ್ತೆ ಮಾಡಿರುವುದನ್ನು ತೆರವು ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಕೆರೆ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ತೆರವು ಮಾಡುವಂತೆ ಪ್ರತಿಭಟನೆ ಮಾಡಿದ್ದೇವೆ, ತೆರವು ಮಾಡುವುದಾಗಿ ಹೇಳಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೇಮಲತಾ ನಾಯಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳ್ಳತನದ ಆತಂಕ: ಕನಕಾಚಲಪತಿ ದೇಗುಲದ ಆಭರಣ ಗಂಗಾವತಿಗೆ ಶಿಪ್ಟ್
ಭೂ ಗ್ಯಾರಂಟಿ ಪ್ರಭಾವ: ಸರ್ಕಾರಿ ಜಾಗೆಗೆ ಲಗ್ಗೆಯಿಟ್ಟ ಗ್ರಾಮಸ್ಥರು