ಕಾರವಾರ: ಬಹುಭಾಷೆ, ಬಹುಸಂಸ್ಕೃತಿಯ ಬೀಡಾದ ಗಡಿ ಪ್ರದೇಶವಾದ ಕಾರವಾರದಲ್ಲಿ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.
ಬಳಿಕ ಮಾತನಾಡಿದ ಅವರು, ನಾವು ಅಜ್ಞಾನದ ಬೆಳಕಿನಿಂದ ಜ್ಞಾನದ ಕೇಡನ್ನು ನೋಡುವ ಆತಂಕದ ಕಾಲದಲ್ಲಿದ್ದೇವೆ. ಸುಳ್ಳುಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ, ಸತ್ಯಕ್ಕೆ ಚಿರಾಯುಷ್ಯ ಹಾಗೂ ಸುಳ್ಳಿಗೆ ಅಲ್ಪಾಯುಷ್ಯ ಎಂಬುದನ್ನು ಯುವಜನತೆ ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತ್ಯವನ್ನು ಕೇವಲ ವಿಮರ್ಶೆಗಾಗಿ ಓದದೇ, ಸಮಾಜದ ಸತ್ಯದ ದರ್ಶನಕ್ಕಾಗಿ ಓದಬೇಕು ಎಂದ ಅವರು, ಆದಿಕವಿ ಪಂಪ, ಯಶವಂತ ಚಿತ್ತಾಲ, ಆರ್.ವಿ. ಭಂಡಾರಿ ಅವರಂಥ ದಿಗ್ಗಜರ ಸಾಹಿತ್ಯಿಕ ಕೊಡುಗೆ ಸ್ಮರಿಸಿದರು. ಗಾಂಧೀಜಿ ಅವರೊಂದಿಗಿನ ಈ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನಂಟನ್ನು ವಿಶೇಷವಾಗಿ ಸ್ಮರಿಸಿದರು.ಕಾರವಾರ-ಅಂಕೋಲಾ ಶಾಸಕ ಸತೀಶ ಸೈಲ್ ಮಾತನಾಡಿ, ಕಾರವಾರದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಸೂಕ್ತ ಜಾಗ ಒದಗಿಸಿದರೆ, ಸುಸಜ್ಜಿತವಾದ ಹೊಸ ಕನ್ನಡ ಭವನವನ್ನೇ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಕಾರವಾರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರದಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗಮಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಅಲ್ಲದೇ ಜನರಿಗೋಸ್ಕರ ಕೆಲಸ ಮಾಡಲು ತಾನು ಎಂದಿಗೂ ಸಿದ್ಧನಿದ್ದೇನೆ. ಈ ನಿಟ್ಟಿನಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಟ್ಟಿಗೆ ಇರೋಣ, ಕನ್ನಡ ಉಳಿವಿಗೆ ಎಲ್ಲರೂ ಸೇರಿ ಶ್ರಮಿಸೋಣ ಎಂದು ಕರೆಕೊಟ್ಟರು.
ಕೇವಲ ಶಿಷ್ಟ ಸಾಹಿತಿಗಳನ್ನು ಮಾತ್ರ ಆಯ್ಕೆ ಮಾಡುವ ಸಂಪ್ರದಾಯವನ್ನು ಬದಿಗೊತ್ತಿ, ಈ ಬಾರಿ ಬುಡಕಟ್ಟು ಸಮುದಾಯದ ರಂಗಭೂಮಿ ಕಲಾವಿದ ಗೋವಿಂದ ಕುಮಾರ್ ಗೌಡ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದರ ಕುರಿತು ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರಾದ ಸಾಹಿತಿಗಳು, ರಂಗಭೂಮಿ ಕಲಾವಿದರಾದ ಜಿ.ಡಿ. ಗೋವಿಂದಕುಮಾರ ಅವರನ್ನು ನಗರದ ಮಿತ್ರಸಮಾಜ ಮೈದಾನದಿಂದ ಸಮ್ಮೇಳನದ ವೇದಿಕೆ ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ಆಯೋಜಿಸಲಾಗಿದ್ದ ಬರೋಬ್ಬರಿ 500 ಮೀಟರ್ ಉದ್ದದ ಬೃಹತ್ ಕನ್ನಡ ಧ್ವಜದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪ್ರೇಮಾ ಟಿ.ಎಂ.ಆರ್., ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ, ಕೆ.ಪಿ. ನಾಯ್ಕ, ಜಿ.ಡಿ. ಮನೋಜೆ, ಪಿ.ಆರ್. ನಾಯ್ಕ, ದೇವಿದಾಸ ನಾಯ್ಕ, ಮಾಧವ ನಾಯ್ಕ ಸೇರಿದಂತೆ ಹಲವರು ಇದ್ದರು.