ಕನ್ನಡಪ್ರಭ ವಾರ್ತೆ ಬಳ್ಳಾರಿ/ ಶಿವಮೊಗ್ಗ/ ಬೀದರ್
ಬಳ್ಳಾರಿಯಲ್ಲಿ ವಿಧಾನ ಪರಿಷತ್ ಸಚೇತಕ ಎನ್.ರವಿಕುಮಾರ ನೇತೃತ್ವದಲ್ಲಿ ಕನಕದುರ್ಗಮ್ಮ ದೇವಸ್ಥಾನದಿಂದ ಡೀಸಿ ಕಚೇರಿಯವರೆಗೆ ರ್‍ಯಾಲಿ ನಡೆಸಿ, ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರವಿಕುಮಾರ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಕಾರಣರಾಗಿದ್ದು, ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಮಧ್ಯೆ ಶಿವಮೊಗ್ಗದಲ್ಲಿಯೂ ಸಚಿವರ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಬೀದರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆ ಪ್ರಕರಣದಲ್ಲಿ ನಾಗೇಂದ್ರ ರಾಜೀನಾಮೆ ನೀಡಬೇಕು, ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಅವರೇ ಖುದ್ದು ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.