ಸಂಡೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮುಖಂಡರು ಪಟ್ಟಣದಲ್ಲಿನ ಬಿಜೆಪಿ ಕಚೇರಿಯಿಂದ ವಿಜಯವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಎಸ್. ದಿವಾಕರ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ರಾಜ್ಯದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಂತೆ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.ಮುಖಂಡ ಉಡೇದ ಸುರೇಶ್ ಮತನಾಡಿ, ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ವಿರುದ್ಧ ಶೇ.40 ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ರಾಜ್ಯದಲ್ಲಿ ಶೇ.100ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರ ಆತ್ಮಹತ್ಯ ಭಾಗ್ಯ, ಕೊಲೆಗಳ ಭಾಗ್ಯವನ್ನು ಕಲ್ಪಿಸುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಬೈಕ್, ಕಾರು ಮುಂತಾದ ವಾಹನಗಳ ಮೇಲಿನ ಟ್ಯಾಕ್ಸ್ ಹೆಚ್ಚಿಸಿದೆ. ಆದರೆ, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲಾಗುತ್ತಿಲ್ಲ. ಸಾರಿಗೆ ದರಗಳನ್ನು ಹೆಚ್ಚಿಸುವ ಮೂಲಕ ಪುರುಷರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲೂಕಿನಲ್ಲಿ ಡಿಎಂಎಫ್, ಸಿಎಸ್‌ಆರ್ ಅನುದಾನಗಳು ಸಾಕಷ್ಟಿದ್ದರೂ ತೋರಣಗಲ್ಲಿನಲ್ಲಿ ರಸ್ತೆಗಳನ್ನು ಮಾಡಿಸಲಾಗುತ್ತಿಲ್ಲ. ಒಂದು ಬಸ್‌ಸ್ಟ್ಯಾಂಡ್ ಇಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದು ಆರೋಪಿಸಿದರು.ಮಾಜಿ ಗ್ರಾಪಂ ಅಧ್ಯಕ್ಷೆ ಮಂಜುಳ, ಮುಖಂಡರಾದ ವಸಂತಕುಮಾರ್, ವಿಶ್ವನಾಥ ರೆಡ್ಡಿ ಕಾಂಗ್ರೆಸ್ ಪಕ್ಷದ ಆಡಳಿತ ಟೀಕಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ರಾಮಕೃಷ್ಣ, ಆರ್.ಟಿ. ರಘು, ಡಿ. ಪ್ರಹ್ಲಾದ್, ಆಶೋಕಶೆಟ್ಟಿ, ಕಿನ್ನೂರೇಶ್ವರ, ವಾಮಣ್ಣ, ಅನಂತನಾಯ್ಡು, ವಿ.ಎಸ್. ಶಂಕರ್, ದರೋಜಿ ರಮೇಶ್, ಅಂಜಿನಿ, ಗಂಡಿ ಮಾರೆಪ್ಪ, ನರಸಿಂಹ, ಕೆ.ಎಂ. ವಿನಾಯಕ, ಶರಣಯ್ಯ ಮುಂತಾದವರು ಭಾಗವಹಿಸಿದ್ದರು.ಸಂಡೂರಿನಲ್ಲಿ ಶನಿವಾರ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ, ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದರು.