ಹೊಸಪೇಟೆ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಜನ ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಬಿಜೆಪಿ ಘಟಕ ಮತ್ತು ಸ್ಥಳೀಯ ಮಂಡಳದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಐಪಿಎಲ್ ಪಂದ್ಯಾವಳಿ ಗೆದ್ದ ಬಳಿಕ ಬೆಂಗಳೂರಿಗೆ ತಂಡ ಆಗಮಿಸಲಿದೆ ಎಂಬುದು ರಾಜ್ಯ ಸರ್ಕಾರಕ್ಕೆ ತಿಳಿದಿತ್ತು. ಎಲ್ಲವೂ ಗೊತ್ತಿದ್ದು, ಈಗ ಇವೆಂಟ್ ಮ್ಯಾನೇಜ್‌ಮೆಂಟ್, ಪೊಲೀಸರು, ಕೆಎಸ್‌ಸಿಎ ಮತ್ತು ಆರ್‌ಸಿಬಿ ತಂಡವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ರಾಜ್ಯದ ಜನರನ್ನು ಕತ್ತಲೆಯಲ್ಲಿ ಇಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಮೊದಲು ಭದ್ರತಾ ದೃಷ್ಟಿಕೋನದಿಂದ ಸುರಕ್ಷಾ ಕ್ರಮ ಕೈಗೊಳ್ಳಬೇಕಿತ್ತು. ಪೊಲೀಸರು ಅನುಮತಿ ನೀಡದಿದ್ದರೂ ಒತ್ತಡ ಹೇರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಎಲ್ಲ ಲೋಪಕ್ಕೆ ಯಾರು ಹೊಣೆ? 11 ಜನರ ಸಾವಿನ ನೈತಿಕೆ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಬಿಜೆಪಿ ಮಂಡಳ ಅಧ್ಯಕ್ಷ ಶಂಕರ ಮೇಟಿ, ಜಿಲ್ಲಾ ವಕ್ತಾರ ಅಶೋಕ್ ಜೀರೆ, ನಗರಸಭೆ ಸದಸ್ಯ ಜೀವರತ್ನಂ, ಮಂಡಳ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ, ಮುಖಂಡರಾದ ನಾಗೇಂದ್ರ, ಮಧುರ ಚನ್ನ ಶಾಸ್ತ್ರಿ, ಗೌಳಿ ರುದ್ರಪ್ಪ, ಹೊನ್ನೂರಪ್ಪ, ಗೌಳಿ ಬಸವರಾಜ್, ವಿಜಯೇಂದ್ರ, ಅನುರಾಧಾ ಮತ್ತಿತರರಿದ್ದರು.