ಅರಣ್ಯ ಭೂಮಿ ಉಳುಮೆಗೆ ವಿಶೇಷ ಪ್ರಸ್ತಾವನೆ: ಖಂಡ್ರೆ

KannadaprabhaNewsNetwork |  
Published : Jun 07, 2025, 02:35 AM IST
ಖಂಡ್ರೆ | Kannada Prabha

ಸಾರಾಂಶ

ಅರಣ್ಯ ಕಾಯಿದೆ 1963ರ ಸೆಕ್ಷನ್‌ 4ರ ಅಡಿ ಅಧಿಸೂಚನೆ ಹೊರಡಿಸಿದ ಬಳಿಕ ಮಂಜೂರಾಗಿ 30-40 ವರ್ಷಗಳಿಂದ ಮನೆ ಕಟ್ಟಿ, ಉಳುಮೆ ಮಾಡುತ್ತಿರುವ ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಹಾಗೂ ಸುಪ್ರೀಂ ಕೋರ್ಟ್‌ಗೆ ವಿಶೇಷ ಪ್ರಸ್ತಾವನೆ ಸಲ್ಲಿಸುವುದಾಗಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅರಣ್ಯ ಕಾಯಿದೆ 1963ರ ಸೆಕ್ಷನ್‌ 4ರ ಅಡಿ ಅಧಿಸೂಚನೆ ಹೊರಡಿಸಿದ ಬಳಿಕ ಮಂಜೂರಾಗಿ 30-40 ವರ್ಷಗಳಿಂದ ಮನೆ ಕಟ್ಟಿ, ಉಳುಮೆ ಮಾಡುತ್ತಿರುವ ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಹಾಗೂ ಸುಪ್ರೀಂ ಕೋರ್ಟ್‌ಗೆ ವಿಶೇಷ ಪ್ರಸ್ತಾವನೆ ಸಲ್ಲಿಸುವುದಾಗಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಭರವಸೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಹಾಗೂ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರಿಗೆ ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಜಮೀನನ್ನು ಡೀಮ್ಡ್‌ ಅರಣ್ಯ ವ್ಯಾಪ್ತಿಯಿಂದ ಕೈಬಿಡಬೇಕು. ಅದಕ್ಕೆ ಪರಿಹಾರವಾಗಿ ಅರಣ್ಯೇತರ ಕಂದಾಯ ಭೂಮಿಯನ್ನು ನೀಡಿ ಅಲ್ಲಿ ಅರಣ್ಯೀಕರಣ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಎಂದು ಭರವಸೆ ನೀಡಿದರು.

ಅರಣ್ಯ ಕಾಯಿದೆ 1963ರ ಸೆಕ್ಷನ್ 4ರಡಿ ಅಧಿಸೂಚನೆ ಆಗುವ ಮುನ್ನ ಮಂಜೂರಾಗಿರುವ ಭೂಮಿಯನ್ನು ಅರಣ್ಯದಿಂದ ಕೈಬಿಡಲು ಸರ್ಕಾರಕ್ಕೆ ಅವಕಾಶವಿದೆ. ಆದರೆ ಅಧಿಸೂಚನೆ ಹೊರಡಿಸಿದ ಬಳಿಕ ಮಂಜೂರಾಗಿರುವ ಜಮೀನು, ವಸತಿ ಪ್ರದೇಶ, ಪಟ್ಟಾಭೂಮಿ ಇತ್ಯಾದಿ ಇರುವ ಜಾಗವನ್ನು ಡೀಮ್ಡ್‌ ಅರಣ್ಯದಿಂದ ಕೈಬಿಡಬೇಕು. ಈ ಜಮೀನಿಗೆ ಪರ್ಯಾಯವಾಗಿ ಬೇರೆಡೆ ಲಭ್ಯವಿರುವ ಅರಣ್ಯೇತರ ಭೂಮಿ ನೀಡುತ್ತೇವೆ ಎಂದು ಮನವಿ ಸಲ್ಲಿಸಲಾಗುವುದು ಎಂದು ಖಂಡ್ರೆ ತಿಳಿಸಿದರು.

ಹಾಸನ ಜಿಲ್ಲೆಯ ಅರಸೀಕೆರೆ ವ್ಯಾಪ್ತಿಯಲ್ಲಿನ ಕರಡಿ ಧಾಮದ ಸುತ್ತ ಪ್ರಸ್ತುತ 10 ಕಿ.ಮೀ. ಬಫರ್ ವಲಯ ಎಂದು ಘೋಷಿಸಲಾಗಿರುವ ಕಾರಣ ಗಡಿ ಭಾಗದ ಚಿಕ್ಕಮಗಳೂರು ರೈತರೂ ಸಂಕಷ್ಟ ಎದುರಿಸುವಂತಾಗಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು, ಈ ಮಿತಿಯನ್ನು 1 ಕಿ.ಮೀ.ಗೆ ಇಳಿಕೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಭರವಸೆ ನೀಡಿದರು.

ಹಲವು ಪ್ರಕರಣಗಳಲ್ಲಿ ಸೆಕ್ಷನ್ 4 ಅಧಿಸೂಚನೆ ಆಗಿ 60-70 ವರ್ಷವಾಗಿದ್ದರೂ ಇನ್ನೂ ಸೆಕ್ಷನ್ 17 ಆಗಿರುವುದಿಲ್ಲ. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿ ಬಳಿಕ ಈಗ ಅಂತಹ ಅರಣ್ಯ ಕೈಬಿಡುವುದು ಕಷ್ಟಸಾಧ್ಯ ಆಗಿದೆ. ಹೀಗಾಗಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್‌ಗೆ ಮನವಿ ಮಾಡುವುದು ಅನಿವಾರ್ಯ ಎಂದು ಹೇಳಿದರು.

ಪರಿಭಾವಿತ ಅರಣ್ಯ (ಡೀಮ್ಡ್) ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿರುವ ಸರ್ವೆ ನಂಬರ್‌ನಲ್ಲಿ ಕೂಡ ಮನೆಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಕಟ್ಟಡ, ಪಟ್ಟಾಭೂಮಿ ಇದೆ. ಈಗ ಅಂತಿಮವಾಗಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸುವ ಅವಕಾಶ ದೊರೆತಿದ್ದು, ಸಮರ್ಪಕವಾಗಿ ಸರ್ವೇ ನಡೆಸಿ ಕೈಬಿಡಲು ಅರ್ಹವಾದ ಜಮೀನಿನ ಪ್ರಮಾಣ ನಿರ್ಧರಿಸಬೇಕು. ಅದಕ್ಕೆ ಪರ್ಯಾಯವಾಗಿ ಬೇರೆ ಕಡೆ ಕಂದಾಯ ಭೂಮಿ ನೀಡುವುದಾಗಿ ಮತ್ತು ಅಲ್ಲಿ ಅರಣ್ಯ ಬೆಳೆಸುವುದಾಗಿ ತಿಳಿಸಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದರು.

ಈಗಾಗಲೇ 2022ರಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ಡೀಮ್ಡ್ ಅರಣ್ಯ ಕುರಿತ ಪ್ರಮಾಣಪತ್ರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಲು ಅರಣ್ಯ ಸಚಿವರು ಸೂಚನೆ ನೀಡಿದರು.ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ರಾಜೇಗೌಡ, ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಸುಭಾಷ್ ಮಾಲ್ಕಡೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ