ಕಾಂಗ್ರೆಸ್ ಸಂಸದನ ವಜಾಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Oct 13, 2026, 01:15 AM IST
 | Kannada Prabha

ಸಾರಾಂಶ

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜವ್ಯವೆಸಗಿದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಪ್ರಾಧ್ಯಾಪಕ ಮತ್ತು ಕಾಂಗ್ರೆಸ್ ಸಂಸದ ಅಂಗೋಂಚ ಬಿಮೋಲ್ ಅಕೋಯಿಜಾಮ್ ಅವರನ್ನು ಸಂಸತ್ ಸ್ಥಾನದಿಂದ ವಜಾಗೊಳಿಸಿ ಶಿಕ್ಷೆ ವಿಧಿಸಿಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜವ್ಯವೆಸಗಿದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಪ್ರಾಧ್ಯಾಪಕ ಮತ್ತು ಕಾಂಗ್ರೆಸ್ ಸಂಸದ ಅಂಗೋಂಚ ಬಿಮೋಲ್ ಅಕೋಯಿಜಾಮ್ ಅವರನ್ನು ಸಂಸತ್ ಸ್ಥಾನದಿಂದ ವಜಾಗೊಳಿಸಿ ಶಿಕ್ಷೆ ವಿಧಿಸಿಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಜೆಎನ್‌ಯು ಪ್ರಾಧ್ಯಾಪಕ, ಕಾಂಗ್ರೆಸ್ ಸಂಸದ ಬಿಮೋಲ್ ಅಕೋಯಿಜಾಮ್ ವಿರುದ್ಧ ಅನೇಕ ಲೈಂಗಿಕ ಕಿರುಕುಳ ಆರೋಪಗಳಿದ್ದರೂ, ಖಂಡಿಸದೆ, ತಮ್ಮದೇ ಪಕ್ಷದ ಸಂಸದನ ವಿರುದ್ಧ ಕ್ರಮ ತೆಗೆದುಕೊಳ್ಳದೆ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ. ಬಿಮೋಲ್ ವಿರುದ್ಧ ಕಾಂಗ್ರೆಸ್‌ನವರು ಯಾವುದೇ ಹೇಳಿಕೆ ನೀಡದೆ ಆರೋಪಿ ರಕ್ಷಣೆ ಮಾಡುತ್ತಿದ್ದಾರೆ. ಪ್ರಾಧ್ಯಾಪಕನಾಗಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜವ್ಯ ಮಾಡಿರುವುದು ಹೀನಾಯ ಕೃತ್ಯ. ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಮಹಿಳೆಯರಿಗೆ ಗೌರವ ನೀಡುವ, ಅವರಿಗೆ ರಕ್ಷಣೆ ನೀಡುವ ಬದ್ಧತೆ ಇಲ್ಲ. ರಾಜ್ಯ ಕಾಂಗ್ರೆಸ್ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ. ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಹೊರತು, ಅವರನ್ನು ಸಮಾನತೆಯಿಂದ ಕಾಣುವ, ಸ್ಥಾನಮಾನ, ಗೌರವ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ರಕ್ಷಣೆ, ದೇಶದ ಸುಭದ್ರತೆ ಬಗ್ಗೆ ಬದ್ಧತೆ ಇಲ್ಲ ಎಂದು ಆರೋಪಿಸಿದರು.ಬಿಜೆಪಿ ಕಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಕಾಲೇಜಿನ ಪ್ರಾಧ್ಯಾಪಕರೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವುದು ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹೆದರುವಂತಾಗಿದೆ. ತಮ್ಮ ಸಂಸದ ಇಂತಹ ದುಷ್ಕೃತ್ಯ ನಡೆಸಿದ್ದರೂ ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡದಾಗಿ ಭಾಷಣ ಮಾಡುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾವ ಕಾಂಗ್ರೆಸ್ ನಾಯಕರೂ ಈ ಪ್ರಕರಣವನ್ನು ಖಂಡಿಸಿಲ್ಲ. ಕಾಂಗ್ರೆಸ್ ಪಕ್ಷ ಹೆಣ್ಣುಮಕ್ಕಳ ಬಗ್ಗೆ ಹೊಂದಿರುವ ನಿಲುವು ಏನೆಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

ಬಿಮೋಲ್ ಅಕೋಯಿಜಾಮ್‌ನನ್ನು ಅಮಾನತುಗೊಳಿಸಿದ್ದು, ಜೆಎನ್‌ಯು ಆಂತರಿಕ ಸಮಿತಿಯು ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಶಿಫಾರಸು ಮಾಡಿದೆ. ಪ್ರೊಫೆಸರ್ ಅಂಗೋಂಚ ಅವರು ಪರೀಕ್ಷಾ ಅಂಕಗಳನ್ನು ಹೆಚ್ಚಿಸುವ ಸಲುವಾಗಿ ವಿದ್ಯಾರ್ಥಿನಿಯರನ್ನು ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾರೆ ಎಂಬ ಆರೋಪವಿದೆ ಎಂದರು.

ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ, ಯಾರೊಬ್ಬರೂ ಖಂಡಿಸುವ ಪ್ರಯತ್ನ ಮಾಡಿಲ್ಲ. ಬೀದಿಬದಿಯ ಸಣ್ಣಪುಟ್ಟ ವಿಚಾರಗಳಿಗೂ ಪ್ರತಿಕ್ರಿಯೆ ನೀಡುವ ರಾಹುಲ್ ಗಾಂಧಿ ಇಂತಹ ಗಂಭೀರ ಪ್ರಕರಣದ ಬಗ್ಗೆ ಕಾಂಗ್ರೆಸ್ ನಿಲುವನ್ನು ಪ್ರಕಟಿಸಿಲ್ಲ. ಬಿಮೋಲ್ ಅಕೋಯಿ ಜಾಮ್‌ನನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಬೇಕು, ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಬೇಕು ಎಂದು ಅಂಬಿಕಾ ಹುಲಿನಾಯ್ಕರ್ ಒತ್ತಾಯಿಸಿದರು.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೈತ್ರ ಮಂಜುನಾಥ್ ಮಾತನಾಡಿ, ಲೈಂಗಿಕ ಕಿರುಕುಳದ ಆರೋಪಿ ಜೆಎನ್‌ಯು ವಿವಿ ಪ್ರಧ್ಯಾಪಕ, ಸಂಸದ ಬಿಮೋಲ್ ಅಕೋಯಿಜಾಮ್ ವಿರುದ್ಧ ಹಾಗೂ ಈ ಪ್ರಕರಣದ ಬಗ್ಗೆ ಧ್ವನಿ ಎತ್ತದೆ, ಮೌನವಾಗಿ ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರ ವರ್ತನೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಮಹಿಳೆಯರು ನವದುರ್ಗೆಯರಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬಿಮೋಲ್ ಅಕೋಯಿಜಾಮ್‌ಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಹಿರಿಯ ಮುಖಂಡ ವೈ.ಎಚ್. ಹುಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತದೆ ಎಂದು ರಾಹುಲ್ ಗಾಂಧಿ ಭಾಷಣ ಬಿಗಿಯುತ್ತಾರೆ. ಜೆಎನ್‌ಯು ಪ್ರಕರಣದ ಬಗ್ಗೆ ಯಾಕೆ ಮೌನ ವಹಿಸಿದ್ದೀರಿ, ಮಹಿಳೆಯರ ಬಗ್ಗೆ ನಿಮ್ಮ ನಿಲುವು ಏನು ಎಂದು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಐಶ್ವರ್ಯ ಸುರೇಶ್‌ಗೌಡ ಮಾತನಾಡಿ, ರಾಹುಲ್ ಗಾಂಧಿಯವರಿಗೆ ಕಾಕ್ರೋಚ್ ಪಾರ್ಟಿಯವರ ಬಗ್ಗೆ ಇರುವ ಕಾಳಜಿ ದೇಶದ ಹೆಣ್ಣುಮಕ್ಕಳ ಬಗ್ಗೆ ಇಲ್ಲ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ನಾಗರತ್ನ, ಎಚ್.ಎಂ. ರವೀಶಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ಕಾರ್ಯದರ್ಶಿ ಕೆ. ವೇದಮೂರ್ತಿ, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಬಿ.ಎಚ್. ವಸಂತ, ಪ್ರಧಾನ ಕಾರ್ಯದರ್ಶಿ ಮಂಜುಳಾ ಲೋಕೇಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಮುಖಂಡರಾದ ಭೈರಣ್ಣ, ರೇಖಾ ಕುಮಾರ್, ತಾರಾದೇವಿ, ಪದ್ಮಾ ವೆಂಕಟೇಶ್, ಅನ್ನಪೂರ್ಣ, ನವಚೇತನ್, ಬಂಬೂ ಮೋಹನ್, ಪ್ರೀತಂ ಜೈನ್, ಹೊಳಕಲ್ಲು ಆಂಜನಪ್ಪ, ಗಂಗೇಶ್ ಹದ್ದಿನಕಲ್ಲು, ಹನುಮಂತರಾಜು, ವೆಂಕಟೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಬಳ್ಳಾಪುರ: ಐತಿಹಾಸಿಕ ವೀರಗಲ್ಲುಗಳ ಸಂರಕ್ಷಣೆ
ಮಕ್ಕಳಲ್ಲಿ ದೈವತ್ವ ಕಾಣುವುದು ಜೀವನದ ಭಾಗ್ಯ