ಮೃತರನ್ನು ನೇಪಾಳ ಮೂಲದ 23 ವರ್ಷದ ಗೋವಿಂದ ಗೋಕಾಟಿ, ಆತನ ಎರಡು ವರ್ಷದ ಮಗಳು ಕಲೀಸಾ ಗೋಕಾಟಿ ಹಾಗೂ ಗಾಯಾಳು ಪತ್ನಿಯನ್ನು ಧನಲಕ್ಷ್ಮಿ ಗೋಕಾಟಿ ಎಂದು ಗುರ್ತಿಸಲಾಗಿದೆ.
ಆದಿಯೋಗಿ ಇಶಾ ನೋಡಿ ಹಿಂತುರುಗುತ್ತಿದ್ದ ವೇಳೆ ಘಟನೆ । ಹೆಂಡತಿ ಪ್ರಾಣಾಪಾಯದಿಂದ ಪಾರು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆದಿಯೋಗಿ ಇಶಾ ನೋಡಿ ಹಿಂತಿರುಗುತ್ತಿದ್ದ ವೇಳೆ ಬೈಕ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ನೇಪಾಳ ಮೂಲದ ಅಪ್ಪ ಮಗಳು ಸಾಪನ್ನಪ್ಪಿರುವ ಘಟನೆ ನಡೆದಿದೆ.
ನಗರ ಹೊರವಲಯದ ಗೋಪಾಲಕೃಷ್ಣ ಅಮಾನಿಕರೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 44ರ ಬೈಪಾಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಅಪಘಾತದಲ್ಲಿ ಹೆಂಡತಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮೃತರನ್ನು ನೇಪಾಳ ಮೂಲದ 23 ವರ್ಷದ ಗೋವಿಂದ ಗೋಕಾಟಿ, ಆತನ ಎರಡು ವರ್ಷದ ಮಗಳು ಕಲೀಸಾ ಗೋಕಾಟಿ ಹಾಗೂ ಗಾಯಾಳು ಪತ್ನಿಯನ್ನು ಧನಲಕ್ಷ್ಮಿ ಗೋಕಾಟಿ ಎಂದು ಗುರ್ತಿಸಲಾಗಿದೆ.
ನೇಪಾಳ ಮೂಲದ ಗೋವಿಂದ ಗೋಕಾಟಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಬೆಂಗಳೂರಿನಲ್ಲಿಯೇ ಪತ್ನಿ ಮಗಳೊಂದಿಗೆ ವಾಸವಿದ್ದರು. ನಿನ್ನೆ ಭಾನುವಾರ ರಜೆ ಇದ್ದುದರಿಂದ ಬೈಕ್ ನಲ್ಲಿ ಪತ್ನಿ ಮತ್ತು ಮಗಳೊಂದಿಗೆ ಆವಲಗುರ್ಕಿ ಬಳಿಯ ಆದಿಯೋಗಿ ಇಶಾಗೆ ಬಂದು ವಾಪಸ್ಸು ತೆರಳುವ ವೇಳೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ಬೈಪಾಸ್ ರಸ್ತೆಯ ಗೋಪಾಲಕೃಷ್ಣ ಅಮಾನಿಕರೆ ಬಳಿ ಬೈಕ್‌ಗೆ ಹಿಂಬದಿಯಿಂದ ಬಂದ ಟ್ರಕ್ಕೊಂದು ಡಿಕ್ಕಿ ಹೊಡೆಯಿತು.
ಆಗ ಬೈಕ್ ನಲ್ಲಿದ್ದ ಅಪ್ಪ ಮತ್ತು ಆತನ ಪುಟ್ಟ ಮಗಳು ಸ್ಥಳದಲ್ಲಿಯೇ ಜೀವ ಬಿಟ್ಟರು. ಹೆಂಡತಿ ಮಾತ್ರ ತೀವ್ರ ಗಾಯಗೊಂಡು ಬದುಕುಳಿದು ಆಸ್ಪತ್ರೆ ಸೇರಿದ್ದಾರೆ. ಆದರೆ ಡಿಕ್ಕಿ ಹೊಡೆದ ಟ್ರಕ್ ಮಾತ್ರ ನಿಲ್ಲಿಸದೆ ಹಾಗೆಯೆ ಹೊರಟು ಹೋಗಿದ್ದಾನೆ
ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೋಲಿಸರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಮೃತರ ದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆ ಮುಗಿಸಿ ಸಂಬಂಧಿಕರಿಗೆ ಮೃತದೇಹಗಳನ್ನ ಹಸ್ತಾಂತರ ಮಾಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ್ದ ಮೃತನ ಸಂಬಂಧಿಕರ, ಸ್ನೇಹಿತರ ಮತ್ತು ಸಹೋದ್ಯೋಗಿಗಳ ಗೋಳು ಗಗನ ಮುಟ್ಟಿತ್ತು. ಹಿಂದಿ ಭಾಷೆಯಲ್ಲಿ ಮಾತನಾಡುತಿದ್ದ ಅವರು ದೇವರನ್ನ ನೋಡಲು ಬಂದವರನ್ನು ಆ ದೇವರೆ ಕರೆದು ಬಿಟ್ಟನಲ್ಲಾ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಶಾಪ ಹಾಕುತಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.