ಕನ್ನಡಪ್ರಭ ವಾರ್ತೆ ಬೆಳಗಾವಿ
ಸೆಪ್ಟೆಂಬರ್ 3ರಂದು ಕಿತ್ತೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಕಾಂಗ್ರೆಸ್ ಪಕ್ಷದ ಪುಂಡರು ಗುರುವಾರ ರಾತ್ರಿ ಹಲ್ಲೆ ನಡೆಸಿ ಅಪಹರಣ ಮಾಡಿದ್ದಾರೆ. ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ ಪಕ್ಷ ಇಂತಹ ನೀಚ ಕೃತ್ಯ ಎಸಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ಕೃತ್ಯಕ್ಕೆ ಸ್ಥಳೀಯ ಕಾಂಗ್ರೆಸ್ ಶಾಸಕರು ಕುಮಕ್ಕು ನೀಡಿದ್ದಾರೆ. ಘಟನೆಯ ಬಗ್ಗೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಕಿತ್ತೂರು ಶಾಸಕರು, ಕೃತ್ಯದಲ್ಲಿ ಪಾಲ್ಗೊಂಡ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ನಾಯಕಿ ಲಕ್ಷ್ಮೀ ಇನಾಮದಾರ ಮಾತನಾಡಿ, ಈ ಘಟನೆ ಬಗ್ಗೆ ಸೂಕ್ತವಾದ ವಿಚಾರಣೆ ಆಗುವವರೆಗೆ ಹಾಗೂ ಅಪಹರಣಗೊಂಡ ಪಕ್ಷದ ಸದಸ್ಯ ಸುರಕ್ಷಿತವಾಗಿ ಮನೆಗೆ ಮರಳುವವರೆಗೆ ಚುನಾವಣೆ ಮುಂದೂಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ ದೇಶಪಾಂಡೆ, ಧನಶ್ರೀ ದೇಸಾಯಿ, ಧನಂಜಯ ಜಾಧವ ಇತರರು ಪಾಲ್ಗೊಂಡಿದ್ದರು.ಕಿತ್ತೂರು ಪೊಲೀಸ್ ಠಾಣೆ ಎದುರು ಧರಣಿ
ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಈ ಕೃತ್ಯ ಎಸಗಿದ್ದಾರೆ. ಅಪಹರಣಕ್ಕೆ ಒಳಗಾದ ನಾಗರಾಜ ಅಸುಂಡಿ ಕ್ಷೇಮವಾಗಿ ಮನೆಗೆ ಹಿಂದಿರುಗಬೇಕು. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಧಿಕ್ಕಾರ ಕೂಗಿ ಕೆಲ ಕಾಲ ಧರಣಿ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸೈ ಪ್ರವೀಣ ಗಂಗೋಳ ಅವರ ಭರವಸೆ ಬಳಿಕ ಧರಣಿ ಕೈಬಿಡಲಾಯಿತು.
ಸದಸ್ಯನ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಭೇಟಿ:
ಈ ವೇಳೆ ಮಾತನಾಡಿದ ಅವರು, ಪ್ರಕರಣದ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಿಷಯದ ಗಂಭೀರತೆ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಪಹರಣಕ್ಕೊಳಗಾದ ನಾಗರಾಜ ಸುರಕ್ಷಿತವಾಗಿ ವಾಪಸ್ ಬರಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಈ ಕುರಿತು ಕಾನೂನು ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ಕಿತ್ತೂರು ಮಂಡಳದ ವತಿಯಿಂದ ಅಧ್ಯಕ್ಷ ಬಸವರಾಜ ಪರವಣ್ಣವರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.