ಭಟ್ಕಳ: ರಾಜ್ಯದ ಕಾಂಗ್ರೆಸ್ ಸರ್ಕಾರದ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಮತ್ತು ಗುತ್ತಿಗೆದಾರರು, ಅಧಿಕಾರಿಗಳ ಆತ್ಮಹತ್ಯೆ ಖಂಡಿಸಿ ಶನಿವಾರ ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರ ಮೇಲೆ ಒಂದಿಲ್ಲೊಂದು ಹೊರೆ ಹಾಕುತ್ತಲೇ ಬಂದಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಯಾವುದೇ ಇಲಾಖೆಯಲ್ಲಿ ಕೆಲಸ ಆಗುತ್ತಿಲ್ಲ. ಸರ್ಕಾರ ಬಂದು ಒಂದೂವರೆ ವರ್ಷ ಕಳೆದರೂ ಅಭಿವೃದ್ಧಿ ಮರಿಚೀಕೆ ಆಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವುದರದಲ್ಲೇ ಇದೆ ಹೊರತು, ಅಭಿವೃದ್ಧಿ ಕಾರ್ಯ ಮಾಡಲು ಮುಂದಾಗುತ್ತಿಲ್ಲ. ಸರ್ಕಾರದ ದುರಾಡಳಿತಕ್ಕೆ ಜನತೆ ರೋಸಿ ಹೋಗಿದ್ದಾರೆ. ಇದೊಂದು ಹಗರಣಗಳ ಸರ್ಕಾರವಾಗಿದ್ದು, ಹಗರಣಗಳನ್ನು ಮುಚ್ಚಿ ಹಾಕಲು ನಾನಾ ರೀತಿಯ ಕಸರತ್ತು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದರಿನ ಗುತ್ತಿಗೆದಾರ ಸಚಿನ್ ಪಂಚಾಳ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಚಿವರು ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡುತ್ತಿದ್ದು, ಕೆಲವರು ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬಾಣಂತಿಯರ ಬಗ್ಗೆಯೂ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಲಾಗಿದೆ.ಪ್ರತಿಭಟನಾಕಾರರನ್ನುದ್ದೇಶಿಸಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮನವಿ ಸ್ವೀಕರಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಯುವ ಬಿಜೆಪಿ ಅಧ್ಯಕ್ಷ ಸುನೀಲ ಕಾಮತ್ , ಪ್ರಮುಖರಾದ ನಾರಾಯಣ ಭಟ್ಟ, ವೆಂಕಟೇಶ ನಾಯ್ಕ, ರಾಘವೇಂದ್ರ ನಾಯ್ಕ, ಪ್ರಮೋದ ಜೋಷಿ, ಯಶೋಧರ ನಾಯ್ಕ, ದಯಾನಂದ ನಾಯ್ಕ ಮುಂತಾದವರಿದ್ದರು.