ಮಂಡ್ಯ ಜಿಲ್ಲೆಯ ಕೆರಗೋಡಿ ಗ್ರಾಮದಲ್ಲಿ ಘಟನೆ । ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ । ಮನವಿ ಸಲ್ಲಿಕೆ । ಧ್ವಜ ಮರು ಸ್ಥಾಪಿಸಲು ಒತ್ತಾಯ
ಮಂಡ್ಯದ ಕೆರಗೋಡಿ ಗ್ರಾಮದಲ್ಲಿ ಹನುಮ ಧ್ವಜವನ್ನು ಇಳಿಸಿದ್ದನ್ನು ಖಂಡಿಸಿ ಇಳಿಸಿರುವ ಧ್ವಜವನ್ನು ಮತ್ತೆ ಸ್ಥಾಪಿಸಲು ಆಗ್ರಹಿಸಿ ಸೋಮವಾರ ನಗರದಲ್ಲಿ ಬಿಜೆಪಿ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ‘ಮಂಡ್ಯ ಜಿಲ್ಲೆಯ ಕೆರಗೋಡಿ ಗ್ರಾಮದಲ್ಲಿ ಧ್ವಜಸ್ತಂಬ ಸ್ಥಾಪಿಸಿ ಹನುಮಾನ್ ಧ್ವಜ ಹಾರಿಸಲಾಗಿತ್ತು. ಗಣರಾಜ್ಯೋತ್ಸವದ ದಿನ ಕೆಳಗಿಳಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಗಿತ್ತು. ಮತ್ತೆ ಹನುಮಾನ್ ಧ್ವಜ ಆರೋಹಣ ಮಾಡಲಾಗಿತ್ತು. ಕೆಲವರು ಒಂದು ಧರ್ಮಕ್ಕೆ ಸೀಮಿತವಾದ ಧ್ವಜ ಆರೋಹಣ ಮಾಡುವುದು ಸರಿಯಲ್ಲವೆಂದು ಆಕ್ಷೇಪಿಸಿ ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು’ ಎಂದು ಹೇಳಿದರು.‘ಧ್ವಜ ಕೆಳಗಿಳಿಸಿದ್ದನ್ನು ವಿರೋಧಿಸಿ ಗ್ರಾಮದ ವ್ಯಾಪಾರಸ್ಥರು ಶನಿವಾರ ಅಂಗಡಿಗಳನ್ನು ಮುಚ್ಚಿ ಪಕ್ಷಾತೀತವಾಗಿ ಮಹಿಳೆಯರು, ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಹನುಮ ಧ್ವಜವನ್ನು ಕಾಂಗ್ರೆಸ್‌ನವರು ಧ್ವಂಸ ಮಾಡಿದ್ದಾರೆ’ ಎಂದು ದೂರಿದರು.
ಯಾರ ಆಕ್ಷೇಪ ಇಲ್ಲದಿದ್ದರೂ ಕೂಡ ಹನುಮಧ್ವಜ ಇಳಿಸಿದ್ದೇಕೆ? ಕರ್ನಾಟಕದಲ್ಲಿರೋದು ಪ್ರಜಾಪ್ರಭುತ್ವವೋ, ತುಘಲಕ್ ಸರ್ಕಾರವೋ? ಹನುಮ ಧ್ವಜ ನಿಷೇಧಿತ ಧ್ವಜವೇ? ಧಾರ್ಮಿಕ ಸ್ವಾತಂತ್ರ್ಯ ಎಂಬುದು ಹಿಂದೂಗಳಿಗಿಲ್ಲವೇ? ಹಿಂದೂ ವಿರೋಧ ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪದಿಂದ ಜನರ ಭಾವನೆಗಳನ್ನು ಕೆಣಕುವ ಕೆಲಸಕ್ಕೆ ಕೈ ಹಾಕುತ್ತಿದೆ. ಅಧಿಕಾರ ಬಳಸಿಕೊಂಡು ಹಿಂದೂ ಶಕ್ತಿಗಳ ವಿರುದ್ಧ ದಮನಕಾರಿ ನೀತಿಗಳನ್ನು ಬಳಸಬೇಡಿ ಎಂದು ಆಗ್ರಹಿಸಿದರು.
‘ಓಲೈಕೆ ರಾಜಕಾರಣಕ್ಕಾಗಿ ನೀವು ಇಷ್ಟು ಕೆಳಮಟ್ಟದ ರಾಜಕಾರಣಕ್ಕೆ ಇಳಿಯುತ್ತೀರೆಂದು ಯಾರೂ ಸಹ ಭಾವಿಸಿರಲಿಲ್ಲ. ಹಿಂದೂಗಳ ಮೇಲಿನ ನಿಮ್ಮ ದಮನಕಾರಿ ನೀತಿಗೆ, ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಗ್ರಾಮಸ್ಥರೆಲ್ಲರೂ ಒಕ್ಕೊರಲು ನಿರ್ಣಯ ಮಾಡಿ ಎಲ್ಲರ ಒಪ್ಪಿಗೆಯನ್ನು ಪಡೆದು ಹಾಕಲಾಗಿದ್ದ ಹನುಮ ಧ್ವಜವನ್ನು ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಬಲಾತ್ಕಾರದಿಂದ ತೆರವುಗೊಳಿಸಿಸಲಾಗಿದೆ. ಅದನ್ನು ಪುನಃ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.