ರಾಣಿಬೆನ್ನೂರು: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಬುಧವಾರ ಸಂಜೆ ಮೊಂಬತ್ತಿ ಬೆಳಗಿಸುವ ಮೂಲಕ ಮೃತ ಪ್ರವಾಸಿಗರಿಗೆ ಶ್ರದ್ಧಾಂಜಲಿ ಅರ್ಪಿಸಿ ಉಗ್ರಗಾಮಿಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ನಗರದ ರೈಲ್ವೆ ಸ್ಟೇಷನ್ ರಸ್ತೆಯ ಬಿಜೆಪಿ ಕಾರ್ಯಾಲಯದಿಂದ ಆರಂಭವಾದ ಮೌನ ಮೆರವಣಿಗೆ ಅಂಚೆ ವೃತ್ತ, ಮೆಡ್ಲೇರಿ ಕ್ರಾಸ್, ಬಸ್ ನಿಲ್ದಾಣದ ರಸ್ತೆಯ ಮೂಲಕ ಕೋರ್ಟ್ ಸರ್ಕಲ್ ತೆರಳಿ ಮೃತರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರವಾಸಿಗರನ್ನು ಕೊಲೆ ಮಾಡಿದ ಉಗ್ರಗಾಮಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯ. ದೇಶದ್ರೋಹಿಗಳನ್ನು ಮಟ್ಟ ಹಾಕುವ ಕಾಲ ಸನ್ನಿಹಿತವಾಗಿದೆ. ಪ್ರವಾಸಿಗರನ್ನು ಹತ್ಯೆ ಮಾಡಿ ಅಮಾನವೀಯವಾಗಿ ನಡೆದುಕೊಂಡ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಾಶ ಮಾಡಲಿದೆ. ಕೊಲೆ ಮಾಡಿದ ಉಗ್ರರ ಸಂಹಾರಕ್ಕಾಗಿ ಪಕ್ಷಾತೀತವಾಗಿ ಒಗ್ಗೂಡಬೇಕು ಎಂದರು.
ಹಾನಗಲ್ಲ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ದಲ್ಲಿ ಉಗ್ರರ ಕೃತ್ಯಕ್ಕೆ ಬಲಿಯಾದ ಪ್ರವಾಸಿಗರ ಗೌರವಾರ್ಥ ಇಲ್ಲಿ ಬುಧವಾರ ಸಂಜೆ ಯುವ ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಬೆಳಗಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇಲ್ಲಿನ ಕನಕ ವೃತ್ತದಲ್ಲಿ ಸೇರಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಉಗ್ರರ ಅಟ್ಟಹಾಸಕ್ಕೆ ಆಕ್ರೋಶ ವ್ಯಕ್ತಪಡಿಸಿ, ಘಟನೆಯಲ್ಲಿ ಮಡಿದ ಜೀವಗಳಿಗಾಗಿ ಕಂಬನಿ ಮಿಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಂತೋಷ ದುಂಡಣ್ಣನವರ ಮಾತನಾಡಿ, ಪ್ರವಾಸಕ್ಕೆಂದು ತೆರಳಿದ ಕನ್ನಡಿಗರೂ ಸೇರಿದಂತೆ ಹಲವು ಮುಗ್ಧ ಜೀವಗಳು ಬಲಿಯಾಗಿವೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿರುವ ಉಗ್ರರ ದಾಳಿಯಿಂದ ಇಡೀ ದೇಶ ಬೆಚ್ಚಿ ಬಿದ್ದಿದೆ. ಅಮಾನವೀಯ ಕೃತ್ಯಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಬಾರದು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ, ಪ್ರವೀಣ ಹಿರೇಮಠ, ಬಾಬು ನಿಕ್ಕಂ, ಆದರ್ಶ ಶೆಟ್ಟಿ, ಶಿವು ತಳವಾರ, ಶಿವು ಭದ್ರಾವತಿ, ರಾಜಕುಮಾರ ಶಿರಪಂತಿ, ಅಬ್ದುಲ್‌ರಜಾಕ್ ಮುಲ್ಲಾ, ನಾಗರಾಜ ಆರೇರ, ರಫೀಕ್ ಉಪ್ಪುಣಸಿ, ಇರ್ಫಾನ್ ಮಿಠಾಯಿಗಾರ, ನಿಯಾಜ್ ಸರ್ವಿಕೇರಿ, ಬಸವರಾಜ ಡುಮ್ಮನವರ, ಮೈಲಾರಿ ಬಾರ್ಕಿ, ರಾಮಚಂದ್ರ ಕಲ್ಲೇರ, ಬಸನಗೌಡ ಪಾಟೀಲ, ಲಿಂಗರಾಜ ಮಡಿವಾಳರ ಇದ್ದರು.