ಕನ್ನಡಪ್ರಭ ವಾರ್ತೆ ರಾಯಚೂರು
ಬಂಡಾಯ ಶಮನಕ್ಕಾಗಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್, ಕಾರ್ಯದರ್ಶಿ ಪಿ.ರಾಜೀವ್ ಅವರು ಮಧ್ಯ ಪ್ರವೇಶ ಮಾಡಿ ಅವರು ಸ್ಥಳೀಯ ಐಡಿಎಸ್‌ಎಂಟಿ ಬಡಾವಣೆಯಲ್ಲಿರುವ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಮನೆಯಲ್ಲಿ ಟಿಕೆಟ್ ವಂಚಿತ ಬಿ.ವಿ.ನಾಯಕ ಹಾಗೂ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರೊಂದಿಗೆ ಸಮಾಲೋಚನೆ ನಡೆಸಿ ಸಂಧಾನ ಮಾಡಿ ಬಂಡಾಯ ಶಮನಗೊಳಿಸಿದರು.
ಗಲಾಟೆ:ನಂತರ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ವೇದಿಕೆ ಮೇಲೆ ಎಲ್ಲ ಗಣ್ಯರು ಕುಳಿತ ಸಮಯದಲ್ಲಿಯೇ ಬಿ.ವಿ.ನಾಯಕ ಅಭಿಮಾನಿಗಳು ಚೀರಾಟ, ಗಲಾಟೆ ಮಾಡಿದರು. ಇದೇ ಸಮಯದಲ್ಲಿ ಅವರನ್ನು ಸಮಾಧಾನಪಡಿಸಲು ಹೋದ ಕೆಲ ಕಾರ್ಯಕರ್ತರ ಮೇಲೆ ಹಲ್ಲೆಗೂ ಯತ್ನಿಸಿದ ಘಟನೆ ಸಭೆಯಲ್ಲಿ ಕೆಲಕಾಲ ಕೋಲಾಹಲ ಉಂಟಾಗುವಂತೆ ಮಾಡಿತ್ತು.ರಾಧಾಮೋಹನ್ ಅಗರ್ವಾಲ್, ಪಿ.ರಾಜೀವ್ ಇತರೆ ಮುಖಂಡರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಬಿ.ವಿ ನಾಯಕ ಅವರ ಬೆಂಬಲಿಗರು ಬಿ.ವಿ ನಾಯಕ ಪರ ಜೈಕಾರ ಹಾಕಿ ‘ಗೋ ಬ್ಯಾಕ್ ರಾಜಾ ಅಮರೇಶ್ವರ ನಾಯಕ’ ಘೋಷಣೆ ಕೂಗಿದರು. ಸಭೆಯಲ್ಲಿ ಕೂಗಾಟ, ಚೀರಾಟ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಗೋ ಬ್ಯಾಕ್ ಘೋಷಣೆ ಕೂಗಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದ ನಗರಸಭೆ ಸದಸ್ಯ ಎನ್.ಕೆ ನಾಗರಾಜ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಪಕ್ಷದ ಪ್ರಮುಖ ನಾಯಕರು ಸಮಾಧಾನ ಪಡಿಸಲು ಮುಂದಾದಾಗ ಅನೇಕರು ಸಭೆಯಿಂದ ಹೊರ ನಡೆದರು. ಬಿ.ವಿ ನಾಯಕ ಆಗಮಿಸಿದ ನಂತರ ಪರಿಸ್ಥಿತಿ ತಿಳಿಗೊಳಿಸಿತಾದರೂ ಸಭೆಯಿಂದ ಹೊರ ನಡೆದವರು ಮರಳಿ ಬರಲಿಲ್ಲ. ಬಂಡಯದ ಬಿಸಿಯಿಂದ ರಾಜ್ಯ ನಾಯಕರು ತೀವ್ರ ಮುಜುಗರಕ್ಕೆ ಈಡಾದರು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯದ ನಾಯಕರು, ಪಕ್ಷದ ಹೈಕಮಾಂಡ್ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್ ನೀಡಿದ್ದು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಟಿಕೆಟ್ ವಂಚಿತ ಬಿ.ವಿ.ನಾಯಕ ಅವರಿಂದಲೆನೇ ರಾಜಾ ಅಮರೇಶ್ವರ ನಾಯಕಗೆ ಬಿ.ಫಾರಂನನ್ನು ಹಸ್ತಾಂತರಿಸುವುದರ ಮುಖಾಂತರ ಬಂಡಾಯಕ್ಕೆ ಇತಿಶ್ರೀ ಹಾಡಿದರು.