ಕನ್ನಡಪ್ರಭ ವಾರ್ತೆ ಔರಾದ್
ಧೂಪತಮಹಾಗಾಂವ್ ಗ್ರಾಮದ ರಾಮ ಪ್ರಭು ಅವರಿಗೆ ಸೇರಿದ ಒಂದು ಎತ್ತು (50ಸಾವಿರ ರು. ಮೌಲ್ಯ ) ಮತ್ತು ಅದೇ ಗ್ರಾಮದ ಸಂಜು ಭೋಜೆಪ್ಪ ಯನಗುಂದೆ ಅವರಿಗೆ ಸೇರಿದ ಒಂದು ಆಕಳು ಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮನೆಯ ಹೊರಗಡೆ ಕಟ್ಟಿರುವ ಎತ್ತುಗಳ ಗುಡಿಸಿಲಿನ ಮೇಲೆ ಸಿಡಿಲು ಬಿದ್ದು ಒಂದು ಎತ್ತು, ಒಂದು ಆಕಳು ಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಂದು ಎತ್ತಿಗೆ ಸಿಡಿಲಿನಿಂದ ಸುಟ್ಟ ಗಾಯಗಳಾಗಿವೆ.ಅದೇ ರೀತಿ ತಾಲೂಕಿನ ರಾಯಪಳ್ಳಿ ಗ್ರಾಮದಲ್ಲಿ ಮನೆಯ ಮಾಳಿಗೆ ಮೇಲೆ ತೊಗರಿ ಬೆಳೆ ಇರುವ ಚೀಲ ತರಲು ಹೋದಾಗ ಸಿಡಿಲು ಬಡಿದು ಗಾಳಿಯ ರಭಸಕ್ಕೆ ಕೆಳಗೆ ಬಿದ್ದು ಶೈಲೂ ರಾಮಲು (36) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಔರಾದ್ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ಕಮಲನಗರ ಭಾಗದಲ್ಲಿ ಭಾರಿ ಮಳೆ, ಬಿರುಗಾಳಿ ಹೊಡೆತಕ್ಕೆ ಮರ ಗಿಡಗಳು ಧರೆಗುರುಳಿದಿದ್ದು ಬಸ್ ಸಂಚಾರ ಸ್ಥಗಿತವಾಗಿದೆ, ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಅಕಾಲಿಕ ಮಳೆಯಿಂದ ಮಾವಿನ ಗಿಡದಲ್ಲಿ ಬಿಟ್ಟಂತಹ ಮಾವಿನ ಕಾಯಿ ನೆಲಕ್ಕುರುಳಿ ರೈತರಿಗೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಇದಲ್ಲದೆ ರಸ್ತೆ ಮಧ್ಯದಲ್ಲಿ ಮರ ಗಿಡಗಳು ಬಿದ್ದು ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕಮಲನಗರ ತಾಲೂಕಿನ ಮದನೂರ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಮೇಲೆ ಮನೆಯ ಮಾಳಿಗೆಯ ಶೀಟುಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿ ಗ್ರಾಮದ ತುಂಬಾ ಕತ್ತಲೆ ಆವರಿಸಿಕೊಂಡು ವಿದ್ಯುತ್ ಸ್ಥಗಿತಗೊಂಡಿದೆ. ಹತ್ತಾರು ಮನೆಗಳ ಮೇಲಿನ ಶೀಟು ಕಳೆದುಕೊಂಡ ಕುಟುಂಬಗಳು ಸಂಕಟದಲ್ಲಿ ಸಿಲುಕಿದ್ದಾರೆ. ರಾತ್ರಿಯಿಡೀ ಜಿಟಿ ಜಿಟಿ ಮಳೆ ಮುಂದುವರಿದಿತ್ತು. ಶನಿವಾರವೂ ಮೋಡ ಕವಿದ ವಾತಾವರಣ ಮುಂದುವರಿದಿತ್ತು.