ಕನ್ನಡಪ್ರಭ ವಾರ್ತೆ ಮಂಡ್ಯ
ಇತ್ತೀಚೆಗೆ ಬಿಜೆಪಿ ವಿಕಾಸ ಭವನಕ್ಕೆ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಶಾಸಕ ಭರತ್‌ಶೆಟ್ಟಿ ಹಾಗೂ ಮಾಜಿ ಸಚಿವ ಎನ್.ಮಹೇಶ್ ಅವರು ಮುಖಂಡರು, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ ವೇಳೆ ಡಾ.ಸಿದ್ದರಾಮಯ್ಯನವರ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಮಾಜಿ ಶಾಸಕ ದೊಡ್ಡಬೋರೇಗೌಡರ ಪುತ್ರರಾಗಿರುವ ಡಾ.ಸಿದ್ದರಾಮಯ್ಯನವರು ಸರಳತೆ, ಸಜ್ಜನಿಕೆಗೆ ಹೆಸರಾದವರು. ವಿಚಾರವಂತಿಕೆಯೊಂದಿಗೆ ಉತ್ತಮವಾದ ವಾಕ್ಚಾತುರ್ಯವಿರುವ ವ್ಯಕ್ತಿ ಎನಿಸಿದ್ದಾರೆ. ೨೦೧೮ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ೨.೪೪ ಲಕ್ಷ ಮತಗಳನ್ನು ಗಳಿಸುವುದರೊಂದಿಗೆ ದಾಖಲೆ ನಿರ್ಮಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯೊಳಗೆ ಬಿಜೆಪಿಗೆ ಮೊದಲ ಬಾರಿಗೆ ಅತಿ ಹೆಚ್ಚು ಮತಗಳನ್ನು ದೊರಕಿಸಿಕೊಟ್ಟಿದ್ದ ಕೀರ್ತಿಗೂ ಅವರು ಪಾತ್ರರಾಗಿದ್ದರು. ಇದು ರಾಜ್ಯ ನಾಯಕರ ಗಮನ ಸೆಳೆದಿತ್ತು ಎಂದು ಗೊತ್ತಾಗಿದೆ.೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಡಾ.ಸಿದ್ದರಾಮಯ್ಯನವರಿಗೆ ದೊರಕಬೇಕಿತ್ತು. ಆದರೆ, ಸುಮಲತಾ ಅಂಬರೀಶ್ ಅವರ ಅನಿರೀಕ್ಷಿತ ಆಗಮನದಿಂದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾರಿಗೆ ಬಹಿರಂಗ ಬೆಂಬಲ ಘೋಷಿಸಿದ್ದರಿಂದ ಡಾ.ಸಿದ್ದರಾಮಯ್ಯನವರು ಅವಕಾಶ ವಂಚಿತರಾಗುವಂತಾಗಿತ್ತು.
ಇತ್ತೀಚೆಗಷ್ಟೇ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದ ಡಾ.ಸಿದ್ದರಾಮಯ್ಯನವರಿಗೆ ಜಿಲ್ಲೆಯ ಬಹುತೇಕ ಮುಖಂಡರು, ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದರು. ಪಕ್ಷ ಟಿಕೆಟ್ ನೀಡಿ ಚುನಾವಣಾ ಅಖಾಡಕ್ಕಿಳಿಸಿದರೆ ಗೆಲುವಿಗೆ ಶ್ರಮಿಸುವುದಾಗಿ ಒಮ್ಮತದಿಂದ ಘೋಷಿಸಿದ್ದರು.