ಹಾವೇರಿ: ಬಜೆಟ್ ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟ ಹಣವೆಷ್ಟು, ಖರ್ಚಾಗಿರುವ ಹಣವೆಷ್ಟು ಎನ್ನುವುದನ್ನು ಶ್ವೇತಪತ್ರ ಹೊರಡಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ ಎಲ್ಲಿ ವಿಫಲವಾಗಿದೆ ಎನ್ನುವುದನ್ನು ಬ್ಲಾಕ್ ಪೇಪರ್ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಘಟಕ ಸಿದ್ಧರಾಗಬೇಕು ಎಂದು ಸೂಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನ ಆಂತರಿಕ ವಿಚಾರದಲ್ಲಿ ಯಾವುದೇ ರೀತಿಯ ಹೇಳಿಕೆ ನೀಡಲು ಸಿದ್ಧನಿಲ್ಲ. ಜನರು ಇವರಿಗೆ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ. ಅದನ್ನು ಮಾಡಲು ಇವರಿಗೆ ಸಮಯವಿಲ್ಲ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ನಿಗಮಗಳ ಅಧಿಕಾರಿಗಳ ಸಭೆ ನಡೆಸಿದರು. ಈ ವರ್ಷ ಹಿಂದುಳಿದ ವರ್ಗಗಳ ನಿಗಮಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂದು ಸಿಎಂ ಮಾಡಿರುವ ಸಭೆಯಲ್ಲಿ ಚರ್ಚೆಯೇ ಆಗಲಿಲ್ಲ. ಹಿಂದುಳಿದ ವರ್ಗಗಳ ನಾಯಕರು ಸಿಎಂರನ್ನು ಕೇಳಬೇಕಿತ್ತು. ಅದನ್ನು ವಿರೋಧ ಪಕ್ಷವಾಗಿ ಬಿಜೆಪಿ ಮಾಡುತ್ತದೆ ಎಂದರು.
ಕ್ಲೀನ್ ಚಿಟ್ ನಿರೀಕ್ಷಿತ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವುದು ನಿರೀಕ್ಷಿತ. ಲೋಕಾಯುಕ್ತ ಸಿಎಂ ವಿರುದ್ಧ ಮೃದು ಧೋರಣೆ ತಾಳಿದೆ. ಲೋಕಾಯುಕ್ತ ಸ್ವಾಯತ್ತ ಸಂಸ್ಥೆ ಇದ್ದರೂ ರಾಜ್ಯ ಸರ್ಕಾರದ ಅಡಿಯಲ್ಲಿ ಇರುವ ಪೊಲೀಸರೇ ತನಿಖೆ ಮಾಡುವುದರಿಂದ ಅವರು ಅದೇ ರೀತಿಯ ವರದಿ ಕೊಡುತ್ತಾರೆ. ಅದಕ್ಕಾಗಿಯೇ ಕೇಂದ್ರದ ಸ್ವಾಯತ್ತ ಸಂಸ್ಥೆಯಿಂದ ತನಿಖೆ ಆಗಬೇಕೆಂಬ ಬೇಡಿಕೆ ಇದೆ. ಇಡಿ ತನಿಖೆಯ ಬಗ್ಗೆ ಕೋರ್ಟ್ ತೀರ್ಮಾನ ಮಾಡಬೇಕಿದೆ. ಈ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕೂಡ ಕೋರ್ಟ್‌ನಲ್ಲಿ ಪರಿಶೀಲನೆ ಆಗಲಿದೆ. ಅಂತಿಮವಾಗಿ ಸತ್ಯ ಹೊರ ಬರಲಿದೆ ಎಂದರು.ಸಿದ್ದರಾಮಯ್ಯ ಸೇರಿದಂತೆ ಹಲವಾರು ಜನರು ಸೈಟುಗಳನ್ನು ಪಡೆದಿರುವುದರಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿರುವುದು ಸಿದ್ಧವಾಗಿದೆ. ಎಲ್ಲವೂ ಸರಿಯಾಗಿದ್ದರೆ ಮುಖ್ಯಮಂತ್ರಿಗಳು ಸೈಟ್‌ಗಳನ್ನು ಯಾಕೆ ವಾಪಸ್ ಕೊಟ್ಟರು ಎನ್ನುವುದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಗೃಹಲಕ್ಷ್ಮೀಗೆ ಗ್ರಹಣ: ತಯಾರಿ ಇಲ್ಲದೇ ರಾಜಕೀಯ ಲಾಭಕ್ಕಾಗಿ ಮಾಡಿರುವ ಗ್ಯಾರಂಟಿ ಯೋಜನೆಗಳು ಕುಂಟುವುದು ಸಹಜ. ಗೃಹಲಕ್ಷ್ಮೀ ಯೋಜನೆಗೆ ಅತಿ ಹೆಚ್ಚು ಹಣ ಖರ್ಚಾಗುತ್ತಿದೆ. ಅದನ್ನು ಎರಡ್ಮೂರು ತಿಂಗಳು ನಿಲ್ಲಿಸಿದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ. ಹೀಗಾಗಿ ಗೃಹಲಕ್ಷ್ಮೀ ಯೋಜನೆಗೆ ಗ್ರಹಣ ಹಿಡಿದಿದೆ. ಇದು ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಮತದಾನದ ಹಿಂದಿನ ದಿನ ಮತದಾರರಿಗೆ ನೀಡಿ ಅಧಿಕೃತ ಲಂಚ ಕೊಡುವ ವ್ಯವಸ್ಥೆಯಾಗುತ್ತಿದೆ. ಇದನ್ನು ನೋಡಿಯೂ ಚುನಾವಣಾ ಆಯೋಗವೂ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.ಗೌರವಧನ: ರಾಜ್ಯ ಸರ್ಕಾರ ಮಾತು ಕೊಟ್ಟಂತೆ ಗ್ಯಾರಂಟಿ ಹಣ ಬಿಡುಗಡೆ ಮಾಡಬೇಕು. ಇಂಧನ ಸಚಿವ ಜಾರ್ಜ್ ಅವರು ಇದೇನು ಸಂಬಳವೇ ಎಂದು ಹೇಳಿದ್ದಾರೆ. ಇದು ಸಂಬಳ ಅಲ್ಲ, ಗೌರವಧನ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇದ್ದರೆ, ಗೌರವಧನವನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ಹೆಣ್ಣುಮಕ್ಕಳಿಗೆ ಗೌರವ ನೀಡಿಲ್ಲ ಎಂದು ಅರ್ಥ. ಇಲ್ಲಿ ಯಾರೂ ಭಿಕ್ಷೆ ಬೇಡಲು ನಿಂತಿಲ್ಲ ಎಂದು ವಾಗ್ದಾಳಿ ನಡೆಸಿದರು.