ದೇಶದ ಅತಿದೊಡ್ಡ ಗೂಗಲ್ ಕ್ಯಾಂಪಸ್ ಬೆಂಗ್ಳೂರಲ್ಲಿ ಆರಂಭ -16 ಲಕ್ಷ ಚದರ ಅಡಿ ವಿಸ್ತಾರ, 5000 ಉದ್ಯೋಗಿಗಳಿಗೆ ಅವಕಾಶ

ಸಾರಾಂಶ

ತಂತ್ರಜ್ಞಾನ ಜಗತ್ತಿನ ದೈತ್ಯ ಸಂಸ್ಥೆ ಗೂಗಲ್, ದೇಶದಲ್ಲೇ ಅತಿ ದೊಡ್ಡದಾದ ಆಕರ್ಷಕ ಕ್ಯಾಂಪಸ್ ಅನ್ನು ಬುಧವಾರ ಬೆಂಗಳೂರಿನ ಮಹದೇವಪುರದಲ್ಲಿ ಆರಂಭಿಸಿದೆ. ಅದಕ್ಕೆ ‘ಅನಂತ’ ಎಂದು ನಾಮಕರಣ ಮಾಡಿದೆ.

ನವದೆಹಲಿ: ತಂತ್ರಜ್ಞಾನ ಜಗತ್ತಿನ ದೈತ್ಯ ಸಂಸ್ಥೆ ಗೂಗಲ್, ದೇಶದಲ್ಲೇ ಅತಿ ದೊಡ್ಡದಾದ ಆಕರ್ಷಕ ಕ್ಯಾಂಪಸ್ ಅನ್ನು ಬುಧವಾರ ಬೆಂಗಳೂರಿನ ಮಹದೇವಪುರದಲ್ಲಿ ಆರಂಭಿಸಿದೆ. ಅದಕ್ಕೆ ‘ಅನಂತ’ ಎಂದು ನಾಮಕರಣ ಮಾಡಿದೆ.

ಭಾರತವನ್ನು ತಂತ್ರಜ್ಞಾನ ಕ್ಷೇತ್ರದ ಕಾರ್ಯತಂತ್ರಗಳ ಕೇಂದ್ರಬಿಂದು ಎಂದಿರುವ ಕಂಪನಿಯು, ‘ಜಾಗತಿಕವಾಗಿ ಗೂಗಲ್‌ನ ಅತಿದೊಡ್ಡ ಕಚೇರಿಗಳಲ್ಲಿ ಒಂದಾದ “ಅನಂತ” ಉದ್ಘಾಟನೆಯೊಂದಿಗೆ, ಭಾರತಕ್ಕೆ ನಮ್ಮ ನಿರಂತರ ಬದ್ಧತೆಯ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ’ ಎಂದು ಹೇಳಿದೆ.

‘ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಆರಂಭವಾಗಿರುವ ಅನಂತ, ನಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ಅಭಿವೃದ್ಧಿಗಳಲ್ಲಿ ಒಂದು. ಇದು ಭಾರತ ಮತ್ತು ಪ್ರಪಂಚದ ಹಿತಕ್ಕಾಗಿ ನಮ್ಮ ನಿರಂತರ ಪ್ರಯತ್ನಗಳ ಭಾಗವಾಗಿದೆ’ ಎಂದು ಕಂಪನಿ ತಿಳಿಸಿದೆ.

ಬೆಂಗಳೂರಿನ ಮಹದೇವಪುರದಲ್ಲಿ ನಿರ್ಮಾಣವಾಗಿರುವ ಗೂಗಲ್ ಅನಂತ ಕ್ಯಾಂಪಸ್ 16 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. 5,000ಕ್ಕೂ ಅಧಿಕ ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಿದೆ.

ಕಚೇರಿ ವೈಶಿಷ್ಟ್ಯಗಳು:

ಇದು ಪರಿಸರ ಸ್ನೇಹಿಯಾಗಿದ್ದು, ತ್ಯಾಜ್ಯ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಮಳೆನೀರು ಕೊಯ್ಲು ಸೌಲಭ್ಯ ಕೂಡ ಇರಲಿದೆ. ವಿದ್ಯುತ್ ಬಳಕೆ ಕಡಿಮೆ ಮಾಡಲು ಕಟ್ಟಡದ ಮೇಲೆ ಸ್ಮಾರ್ಟ್ ಎಲೆಕ್ಟ್ರೋ-ಕ್ರೋಮಿಕ್ ಗ್ಲಾಸ್ ಅಳವಡಿಸಲಾಗಿದೆ. ಕಚೇರಿಯ ಒಳಭಾಗವನ್ನು ದೇಶೀಯ ವಸ್ತುಗಳಿಂದ ಅಲಂಕರಿಸಲಾಗಿದೆ.

ಚೈಲ್ಡ್ ಡೇ ಕೇರ್, ದೈಹಿಕ ವ್ಯಾಯಾಮ, ಆಟದ ಕೇಂದ್ರ, ಜಾಗಿಂಗ್ ಪ್ರದೇಶ, ಬ್ಯಾಡ್ಮಿಂಟನ್ ಕೋರ್ಟ್, ವಾಲಿಬಾಲ್, ಕ್ರಿಕೆಟ್ ಆಡಲು ಸೌಲಭ್ಯಗಳು ಇರಲಿವೆ. ಗೂಗಲ್ ಸರ್ಚ್, ಎಐ, ಮ್ಯಾಪ್, ಆ್ಯಂಡ್ರಾಯ್ಡ್, ಗೂಗಲೆ ಪ್ಲೇ, ಕ್ಲೌಡ್ ಸೇರಿದಂತೆ ವಿವಿಧ ವಿಭಾಗಗಳು ಕಾರ್ಯಾಚರಿಸಲಿವೆ. 

Share this article