ಬಂದಿದೆ 10 ನಿಮಿಷದಲ್ಲೇ ಭೂ ಸರ್ವೇ ಮಾಡುವ ರೋವರ್‌ - ಚೈನ್‌ ಹಿಡಿದು ಮಾಡುತ್ತಿದ್ದ ವ್ಯವಸ್ಥೆಗೆ ಬೀಳಲಿದೆ ಬ್ರೇಕ್‌

ಸಾರಾಂಶ

ಚೈನ್‌ ಹಿಡಿದು ಭೂಮಿ ಅಳೆಯುವುದರಿಂದ ಉಂಟಾಗುತ್ತಿದ್ದ ವಿಳಂಬ ತಪ್ಪಿಸಲು 465 ಭೂಮಾಪಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ರೋವರ್‌ ಯಂತ್ರಗಳನ್ನು ನೀಡಲಾಗಿದ್ದು,. ಇನ್ನೂ 5 ಸಾವಿರ ರೋವರ್‌ಗಳನ್ನು ಹಂತಹಂತವಾಗಿ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

 ಬೆಂಗಳೂರು : ಚೈನ್‌ ಹಿಡಿದು ಭೂಮಿ ಅಳೆಯುವುದರಿಂದ ಉಂಟಾಗುತ್ತಿದ್ದ ವಿಳಂಬ ತಪ್ಪಿಸಲು 465 ಭೂಮಾಪಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ರೋವರ್‌ ಯಂತ್ರಗಳನ್ನು ನೀಡಲಾಗಿದ್ದು,. ಇನ್ನೂ 5 ಸಾವಿರ ರೋವರ್‌ಗಳನ್ನು ಹಂತಹಂತವಾಗಿ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸರ್ವೇ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 465 ಭೂ ಮಾಪಕರಿಗೆ ರೋವರ್ ವಿತರಿಸಿ ಮಾತನಾಡಿ, ಚೈನ್ ಹಿಡಿದು ಭೂಮಿ ಅಳೆಯಲು ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಿತ್ತು. ಸರ್ವೇ ಮಾಡಲು ಕನಿಷ್ಠ 70 ನಿಮಿಷ, ನಕ್ಷೆ ತಯಾರಿಸಲು ಮೂರು ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸ ಕೇವಲ 10 ನಿಮಿಷದಲ್ಲಿ ಮುಗಿಸಲಿದೆ ಎಂದರು.

ರಾಜ್ಯದಲ್ಲಿ 1830 ರಿಂದ 1870ರ ವರೆಗೆ ಮಾತ್ರ ಸರ್ವೇ ಕೆಲಸವಾಗಿದೆ. 1967ರಲ್ಲಿ ಅಲ್ಪಸ್ವಲ್ಪ ಪುನರ್‌ ಸರ್ವೇ ನಡೆದಿದೆ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ಸರ್ವೇ ಆಗಿಲ್ಲ. ಅನಾದಿ ಕಾಲದಿಂದಲೂ ಬಳಸಿದ ಚೈನ್ ವ್ಯವಸ್ಥೆ ಈಗಲೂ ಮುಂದುವರೆಯುತ್ತಿರುವುದು ಆಘಾತಕಾರಿ. ಚೈನ್ ಸರ್ವೇಯಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬದಲಾವಣೆ ಮಾಡಬಹುದು. ಇದರಿಂದ ಹಲವರು ಇಂದಿಗೂ ಕೋರ್ಟ್, ಕಚೇರಿಗೆ ಅಲೆಯುವಂತಾಗಿದೆ. ಆದರೆ, ರೋವರ್ ಸರ್ವೇಯಲ್ಲಿ ಇಂತಹ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತ್ಯೇಕ ಪಹಣಿ ವಿತರಣೆ:

ಪ್ರತಿಯೊಬ್ಬ ಭೂಮಾಪಕರಿಗೂ ರೋವರ್ ನೀಡಲು ಸುಮಾರು 5 ಸಾವಿರ ರೋವರ್‌ಗಳನ್ನು ಹಂತ ಹಂತವಾಗಿ ಖರೀದಿಸಿ ನೀಡಲಾಗುವುದು. ಬಹು ಮಾಲೀಕತ್ವವುಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಪ್ರತಿ ಹಿಡುವಳಿದಾರರಿಗೆ ಪೋಡಿ ಮಾಡಿ ಪ್ರತ್ಯೇಕ ಪಹಣಿ ವಿತರಿಸಲಾಗುತ್ತಿದೆ. ಈಗಾಗಲೇ 16,630 ಗ್ರಾಮಗಳ ಅಳತೆ ಕಾರ್ಯ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಪೋಡಿ ಮುಕ್ತ ಗ್ರಾಮ ಅಭಿಯಾನ 2.0 ಅಡಿ ಬಹುಮಾಲೀಕತ್ವ ಪಹಣಿಗಳಲ್ಲಿನ ಖಾಸಗಿ ಜಮೀನಿನ ಪೋಡಿ ದುರಸ್ತಿಯನ್ನು ಪ್ರಸ್ತುತ ಮೋಜಿಣಿ ತಂತ್ರಾಂಶದ ಮೂಲಕ 6,925 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, 573 ಗ್ರಾಮಗಳಲ್ಲಿ ಪೂರ್ಣಗೊಳಿಸಲಾಗಿದೆ. ರಾಜ್ಯದಲ್ಲಿ ಡ್ರೋನ್‌ ಮೂಲಕ ಸರ್ವೇ ಮಾಡುತ್ತಿದ್ದು 21 ಜಿಲ್ಲೆಯ 21,710 ಗ್ರಾಮ ಪೂರ್ಣಗೊಂಡಿವೆ. ಜಮೀನುಗಳಿಗೆ ಹದ್ದುಬಸ್ತು ಮಾಡಲು 120 ರಿಂದ 180 ದಿನವಾಗುತ್ತಿತ್ತು. ಈಗ 45 ದಿನದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ರಿಜ್ವಾನ್ ಅರ್ಷದ್, ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಆಯುಕ್ತರಾದ ಸುನೀಲ್ ಕುಮಾರ್, ಭೂ ಮಾಪನಾ ಇಲಾಖೆ ಆಯುಕ್ತ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. 

Share this article