ನಮ್ಮ ಮೆಟ್ರೋ ದರ ಏರಿಕೆ ವಿರುದ್ಧ ಅರಮನೆ ರಸ್ತೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣದಲ್ಲಿ 23ಕ್ಕೆ ನಾಗರಿಕರ ಸಮಾವೇಶ

Published : Feb 20, 2025, 09:07 AM IST
Namma Metro

ಸಾರಾಂಶ

‘ನಮ್ಮ ಮೆಟ್ರೋ’ ದರ ಏರಿಕೆ ವಿರುದ್ಧ ಫೆ.23ರಂದು ಬೆಳಗ್ಗೆ 11ಕ್ಕೆ ಅರಮನೆ ರಸ್ತೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆ ನಾಗರಿಕ ಸಮಾವೇಶ ಕರೆದಿದ್ದು, ಅಂದು ಮುಂದಿನ ಹೋರಾಟದ ಕುರಿತು ತೀರ್ಮಾನ ಮಾಡುವುದಾಗಿ ತಿಳಿಸಿದೆ.

ಬೆಂಗಳೂರು  : ‘ನಮ್ಮ ಮೆಟ್ರೋ’ ದರ ಏರಿಕೆ ವಿರುದ್ಧ ಫೆ.23ರಂದು ಬೆಳಗ್ಗೆ 11ಕ್ಕೆ ಅರಮನೆ ರಸ್ತೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆ ನಾಗರಿಕ ಸಮಾವೇಶ ಕರೆದಿದ್ದು, ಅಂದು ಮುಂದಿನ ಹೋರಾಟದ ಕುರಿತು ತೀರ್ಮಾನ ಮಾಡುವುದಾಗಿ ತಿಳಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜೇಶ್‌ ಭಟ್‌, ಸಮಾವೇಶದಲ್ಲಿ ನಗರ ಸಾರಿಗೆ ತಜ್ಞರನ್ನು ಆಹ್ವಾನಿಸುತ್ತಿದ್ದು, ಅವರ ಸಲಹೆ ಹಾಗೂ ನೂರಾರು ಜನತೆಯ ಅಭಿಪ್ರಾಯವನ್ನು ಪಡೆಯಲಾಗುವುದು. ಎಲ್ಲರ ಒಮ್ಮತದ ಮೇರೆಗೆ ಮೆಟ್ರೋ ದರ ಏರಿಕೆ ವಿರುದ್ಧ ಹೋರಾಟದ ಮುಂದಿನ ನಡೆ ನಿರ್ಧರಿಸಲಾಗುವುದು ಎಂದರು.

ವಿ.ಎನ್‌.ರಾಜಶೇಖರ್‌ ಮಾತನಾಡಿ, ಬಿಎಂಆರ್‌ಸಿಎಲ್‌ ದರ ಏರಿಸಿರುವ ಹಿಂದೆ ಅಸಮಂಜಸ ಕಾರಣ ನೀಡಿದೆ. 2023-24ರಲ್ಲಿ ₹129 ಲಾಭ ಗಳಿಸಿರುವ ಸಂಸ್ಥೆ 2022-23ರಲ್ಲಿ ₹108 ಲಾಭ ಪಡೆದಿತ್ತು. 2025-26ರ ಸಾಲಿನಲ್ಲಿ ₹200 ಕೋಟಿ ಲಾಭ ಹೊಂದುವ ನಿರೀಕ್ಷೆಯಿದೆ. ಆದರೆ, ಭವಿಷ್ಯದ ಮಾರ್ಗಗಳಿಗೆ ಮಾಡಿರುವ ಸಾಲ, ನಿಲ್ದಾಣಗಳ ಅಭಿವೃದ್ಧಿಗಾಗಿ ದರ ಏರಿಸುತ್ತಿದ್ದೇವೆ ಎನ್ನುವುದರಲ್ಲಿ ಅರ್ಥವಿಲ್ಲ. ಮೆಟ್ರೋವನ್ನು ಖಾಸಗಿಕರಣ ಮಾಡುವ ಹುನ್ನಾರ ಇದರ ಹಿಂದಿದೆ ಎಂದು ದೂರಿದರು. ಬೆಂಗಳೂರು ಉಳಿಸಿ ಸಮಿತಿಯ ಎನ್‌.ರವಿ ಇದ್ದರು.

ಎರಡು ಬಾರಿ ಪರಿಷ್ಕೃತಗೊಂಡ ಬಳಿಕವೂ ಕೂಡ ಶೇ.90ರಷ್ಟು ಏರಿಕೆಯಾದ ಮೆಟ್ರೋ ಪ್ರಯಾಣ ದರ ಇನ್ನೂ ಅಸ್ತಿತ್ವದಲ್ಲಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ದರ ಏರಿಕೆ ತಡೆಯುವುದನ್ನು ಬಿಟ್ಟು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಚಿವರು ಪರಸ್ಪರ ದೂಷಣೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸಮಾವೇಶದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಆನ್‌ಲೈನ್‌ ಮೀಟಿಂಗ್‌ ನಡೆಸುತ್ತಿದ್ದು, ನೂರಾರು ಪ್ರಯಾಣಿಕರು ತಮಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಕರಪತ್ರ, ಸಾಮಾಜಿಕ ಜಾಲತಾಣದ ಮೂಲಕ ಸಮಾವೇಶಕ್ಕೆ ಬರುವಂತೆ ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದರು.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌