ದ.ಕ. ಹಿಂದುತ್ವದ ಭದ್ರಕೋಟೆ ಉಳಿಸಿಕೊಂಡ ಬಿಜೆಪಿ, ಕಾಂಗ್ರೆಸ್‌ ಪ್ರಯತ್ನ ಭಗ್ನ

KannadaprabhaNewsNetwork |  
Published : Jun 05, 2024, 12:31 AM IST
ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿಯ ವಿಜಯಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಗೆ ಪ್ರಮಾಣ ಪತ್ರ ನೀಡುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್‌  | Kannada Prabha

ಸಾರಾಂಶ

ಈ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ದ.ಕ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಪ್ರದರ್ಶನಗೊಂಡಿದೆ. ಆದರೆ ಮೋದಿ ಅಲೆ ಎದುರು ಈ ಒಗ್ಗಟ್ಟು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲುವಿನ ದಡಕ್ಕೆ ತಲುಪಿಸಲು ನೆರವಾಗಲಿಲ್ಲ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರ ಮತ್ತೆ ಬಿಜೆಪಿ ಪಾಲಾಗಿದೆ. ಸುಮಾರು 33 ವರ್ಷಗಳ ಬಳಿಕವೂ ಕ್ಷೇತ್ರವನ್ನು ಮರಳಿ ಪಡೆಯುವ ಕಾಂಗ್ರೆಸ್‌ ಪ್ರಯತ್ನವೂ ಭಗ್ನಗೊಂಡಿದೆ. ಬಿಜೆಪಿ ಮತ್ತೊಮ್ಮೆ ಕ್ಷೇತ್ರವನ್ನು ಹಿಂದುತ್ವದ ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

ಇದರೊಂದಿಗೆ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಿದೆ. ಅಲ್ಲದೆ ಬಿಜೆಪಿ ವಿಜಯ ಅಭಿಯಾನ ನಿರಂತರ ಮುಂದುವರಿದಂತಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌.ಪೂಜಾರಿ ಅವರನ್ನು ಮಣಿಸಿ ಅಭೂತಪೂರ್ವ ಗೆಲವು ದಾಖಲಿಸಿದ್ದಾರೆ.

ಮಂಗಳೂರಿನ ಸುರತ್ಕಲ್‌ ಎನ್‌ಐಟಿಕೆ ಕೇಂದ್ರದಲ್ಲಿ ಮಂಗಳವಾರ ಮತ ಎಣಿಕೆ ನಡೆದಿದ್ದು, ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರನ್ನು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಗೆಲುವಿನ ಪ್ರಮಾಣ ಪತ್ರ ನೀಡಿ ಗೆಲುವನ್ನು ಘೋಷಿಸಿದರು. ಕ್ಷೇತ್ರ ಉಳಿಸಿದ ಬಿಜೆಪಿ:

1991ರಿಂದ ದ.ಕ. ಲೋಕಸಭಾ ಕ್ಷೇತ್ರ ಬಿಜೆಪಿ ಹಿಡಿತದಲ್ಲೇ ಇದೆ. ಈ ಬಾರಿ ಕೈತಪ್ಪದಂತೆ ಭಾರಿ ಪ್ರಯತ್ನ ನಡೆಸಿದ ಬಿಜೆಪಿ ಕೊನೆಗೂ ತನ್ನಲ್ಲೇ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಬಾರಿ ಬಿಜೆಪಿ ಹೊಸ ಮುಖವನ್ನು ಕಣಕ್ಕೆ ಇಳಿಸಿದ್ದು, ಚುನಾವಣೆ ವೇಳೆಗೆ ಜಿಲ್ಲಾ ಬಿಜೆಪಿ ಘಟಕವೂ ಪುನರ್ರಚನೆಗೊಂಡಿತ್ತು. ಅದರಲ್ಲೂ ಹೊಸಬರೇ ಇದ್ದರು. ಹಾಗಾಗಿ ಬಿಜೆಪಿಗೆ ಈ ಚುನಾವಣೆ ಗೆಲ್ಲುವುದು ದೊಡ್ಡ ಸವಾಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಪ್ರಚಾರ, ಕಾರ್ಯಕರ್ತರ ತಂಡದ ಕೆಲಸದ ಪರಿಣಾಮ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಅಭ್ಯರ್ಥಿ ಘೋಷಣೆ ಕೊನೆ ಹಂತದಲ್ಲಿ ನಡೆದರೂ ಧೃತಿಗೆಡದೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಗಾಗಿ ಬಿಜೆಪಿ ಬೆಂಬಲಿಸುವಂತೆ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಮತದಾರರ ಮನೆ ಬಾಗಿಲು ತಟ್ಟಿರುವುದು ಫಲಪ್ರದವಾಗಿದೆ. ಅಲ್ಲದೆ ಕಾಂಗ್ರೆಸ್‌ನ್ನು ಎಸ್‌ಡಿಪಿಐ ಬೆಂಬಲಿಸಿದ ಹಿನ್ನೆಲೆಯಲ್ಲಿ ಹಿಂದು ಸಮುದಾಯದ ಮತಗಳು ಚದುರಿಹೋಗುವುದನ್ನು ತಡೆಯುವಲ್ಲಿ ನಡೆಸಿದ ತಂತ್ರಗಾರಿಕೆ ಬಿಜೆಪಿಗೆ ಹೆಚ್ಚಿನ ಮತ ಗಳಿಕೆಗೆ ಸಾಧ್ಯವಾಯಿತು.ಫಲ ನೀಡದ ಕಾಂಗ್ರೆಸ್‌ ಒಗ್ಗಟ್ಟು:

ಈ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ದ.ಕ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಪ್ರದರ್ಶನಗೊಂಡಿದೆ. ಆದರೆ ಮೋದಿ ಅಲೆ ಎದುರು ಈ ಒಗ್ಗಟ್ಟು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲುವಿನ ದಡಕ್ಕೆ ತಲುಪಿಸಲು ನೆರವಾಗಲಿಲ್ಲ.

ಕಾಂಗ್ರೆಸ್‌ ಕೂಡ ಹೊಸ ಮುಖವಾಗಿ ಪದ್ಮರಾಜ್‌ ಆರ್‌.ಪೂಜಾರಿ ಅವರನ್ನು ಕಣಕ್ಕೆ ಇಳಿಸಿತ್ತು. ಅವರ ಅಭ್ಯರ್ಥಿ ಘೋಷಣೆ ಕೂಡ ಕೊನೆಕ್ಷಣದಲ್ಲಿ ಆಗಿತ್ತು. ಆದರೂ ಕಾಂಗ್ರೆಸ್‌ನ ಜಿಲ್ಲಾ ಮಟ್ಟದ ಎಲ್ಲ ಮುಖಂಡರು ಒಂದಾಗಿ ಪ್ರಚಾರಕ್ಕೆ ಧುಮುಕಿದ್ದರು. ಅಭ್ಯರ್ಥಿ ಪದ್ಮರಾಜ್‌ ಕೂಡ ಎಡೆಬಿಡದೆ ಮನೆ ಭೇಟಿ ಪ್ರಚಾರಕ್ಕೆ ಒತ್ತು ನೀಡಿದ್ದರು. ರಾಜ್ಯ ಅಥವಾ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಆಗಮಿಸಿದರೆ, ಮತದಾರರ ಭೇಟಿಗೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ಸಮಾವೇಶಕ್ಕೆ ಆಸ್ಪದ ನೀಡಿರಲಿಲ್ಲ.

ಇಲ್ಲಿ ಜಾತಿ ಆಧಾರದಲ್ಲೂ ಮತ ಗಳಿಕೆಗೆ ಕಾಂಗ್ರೆಸ್‌ ತಂತ್ರಗಾರಿಕೆ ನಡೆಸಿತ್ತು. ಎಸ್‌ಡಿಪಿಐ ಬೆಂಬಲ ಪಡೆಯುವ ಮೂಲಕ ಮುಸ್ಲಿಂ ಮತಗಳ ಕ್ರೋಢೀಕರಣ ನಡೆಸಿತ್ತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಹಳಷ್ಟು ಮತಗಳಾಗಿ ಪರಿವರ್ತನೆಯಾಗುತ್ತವೆ ಎಂದೇ ಭಾವಿಸಿತ್ತು. ಆದರೆ ಇದಾವುದೂ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಅಷ್ಟಾಗಿ ಪ್ರಭಾವ ಬೀರಲಿಲ್ಲ. ಆದರೂ ಪದ್ಮರಾಜ್‌ ಆರ್‌.ಪೂಜಾರಿ ಅವರು ಹೆಚ್ಚಿನ ಪೈಪೋಟಿ ನೀಡಿದ್ದರು.9 ಬಾರಿಯೂ ಬಿಜೆಪಿ ಗೆಲುವು!

1991ರಿಂದ ನಿರಂತರ 9 ಬಾರಿ ಒಂದೇ ಕ್ಷೇತ್ರದಲ್ಲಿ ಬಿಜೆಪಿ ನಿರಂತರ ಗೆಲುವು ಸಾಧಿಸುವ ಮೂಲಕ ಕರಾವಳಿಯಲ್ಲಿ ಹೊಸ ದಾಖಲೆ ಬರೆದಿದೆ.

1991, 96, 98, 99ರಲ್ಲಿ ಬಿಜೆಪಿಯ ಧನಂಜಯ ಕುಮಾರ್‌, 2004ರಲ್ಲಿ ಡಿ.ವಿ.ಸದಾನಂದ ಗೌಡ, 2009, 2014 ಮತ್ತು 2019ರಲ್ಲಿ ನಳಿನ್‌ ಕುಮಾರ್‌ ಗೆಲುವು ಸಾಧಿಸಿದ್ದಾರೆ. ಧನಂಜಯ ಕುಮಾರ್‌ ನಾಲ್ಕು ಬಾರಿ, ನಳಿನ್‌ ಕುಮಾರ್‌ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇರಳ ಉಸ್ತುವಾರಿಯಾಗಿ ಮೊದಲ ಗೆಲವು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಟಿಕೆಟ್ ವಂಚಿತ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ಗೆ ಕೇರಳ ಚುನಾವಣೆಯ ಉಸ್ತುವಾರಿ ವಹಿಸಲಾಗಿತ್ತು. ಅಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದೆ.

ಮೊದಲ ಬಾರಿಗೆ ಸಂಸದರಾಗಿದ್ದಾಗ ನಳಿನ್‌ ಕುಮಾರ್‌ಗೆ ಕೇರಳ ಉಸ್ತುವಾರಿ ನೀಡಲಾಗಿತ್ತು. ಆಗ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಯಶಸ್ಸಿಗೆ ಕಾರಣವಾಗಿದ್ದರು. ಅದಕ್ಕೂ ಮೊದಲು ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮೊದಲ ಖಾತೆ ತೆರೆದಿತ್ತು.ಇದೀಗ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ಗೆಲುವು ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ