ಖಾಜು ಸಿಂಗೆಗೋಳ
ಸಂಸದ ರಮೇಶ ಜಿಗಜಿಣಗಿ ಅವರಿಗೆ ತವರು ತಾಲೂಕು ಮತ್ತೆ ಕೈ ಹಿಡಿದಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ 25,724 ಹೆಚ್ಚು ಮತಗಳ ಅಂತರವನ್ನು ಇಂಡಿ ತಾಲೂಕು ನೀಡಿದೆ. ಈ ಮೂಲಕ ಸಂಸದ ರಮೇಶ ಜಿಗಜಿಣಗಿ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಪ್ರತಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮತಗಳನ್ನು ಬಿಜೆಪಿಗೆ ಇಂಡಿ ತಾಲೂಕಿಗೆ ನೀಡುತ್ತ ಬಂದಿದೆ. ಇದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ನಮ್ಮ ತಾಲೂಕಿನವರು ಎಂಬ ಭಾವನೆಯಿಂದಲೋ, ರಮೇಶ ಜಿಗಜಿಣಗಿ ಅವರು ಸರಳತೆಯ ರಾಜಕಾರಣಿ ಎಂಬ ಭಾವನೆಯಿಂದಲೋ ಏನೋ ಇಂಡಿ ತಾಲೂಕಿನ ಮತದಾರರು ಪ್ರಸಕ್ತ ಲೋಕಸಭಾ ಚುನಾವಣೆಯಿಂದ ಹಿಡಿದು ಹಿಂದಿನ ಎರಡೂ ಚುನಾವಣೆಗಳಲ್ಲಿಯೂ ತಾಲೂಕಿನ ಜನರು ಎಲ್ಲ ತಾಲೂಕಿಗಿಂತ ಹೆಚ್ಚು ಮತಗಳನ್ನು ಅವರಿಗೆ ನೀಡಿದ್ದಾರೆ.ಆದರೆ ಇದೇ ತಾಲೂಕಿನ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ. ಸಂಸದ ರಮೇಶ ಜಿಗಜಿಗಣಗಿ ಅವರು ಚಿಕ್ಕೋಡಿ ಮತಕ್ಷೇತ್ರವನ್ನು ಬಿಟ್ಟು 2014ರಲ್ಲಿ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿಗಿಂತ ಅಂದು ಇಂಡಿ ತಾಲೂಕಿನ ಮತದಾರರು ಜಿಲ್ಲೆಯ ಎಲ್ಲ ತಾಲೂಕುಗಳಿಗಿಂತ 23 ಸಾವಿರ ಮತಗಳ ಅಂತರವನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದೆ.
ಸಂಸದ ರಮೇಶ ಜಿಗಜಿಣಗಿ ಅವರು ತವರು ತಾಲೂಕು ಇಂಡಿಯ ಸಾರ್ವಜನಿಕರೊಂದಿಗೆ ಕರುಳು ಬಳ್ಳಿಯ ಸಂಬಂಧದಂತೆ ಬೆಳೆದು ಬಂದಿದ್ದಾರೆ. ಸರ್ವರನ್ನು ನನ್ನವರು ಎಂದು ಅಪ್ಪಿಕೊಂಡು ರಾಜಕಾರಣ ಮಾಡುತ್ತ ಬಂದಿರುವ ಜಿಗಜಿಣಗಿ ಅವರು ಅಜಾತಶತ್ರುವಾಗಿ ಜಿಲ್ಲೆಯ ರಾಜಕಾರಣದಲ್ಲಿ ಬೆಳೆದಿದ್ದಾರೆ. 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾರಿಗೂ ಅನ್ಯಾಯ ಮಾಡದ, ಜಾತಿ, ಧರ್ಮದ ಮಧ್ಯ ವೈಷಮ್ಯ ಉಂಟು ಮಾಡದ, ಜಾತಿಯನ್ನು ಎತ್ತಿಕಟ್ಟಿ ರಾಜಕಾರಣ ಮಾಡದ ನಾಯಕನಾಗಿ ಬೆಳೆದು ಬಂದಿದ್ದರಿಂದ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕರು ಅದರಲ್ಲೂ ಇಂಡಿ ತಾಲೂಕಿನ ಜನತೆ ಅವರನ್ನು ಪ್ರತಿ ಚುನಾವಣೆಯಲ್ಲಿ ಎತ್ತಿಕೊಂಡು ಅಪ್ಪಿಕೊಂಡು ಬೆಳೆಸಿದ್ದಾರೆ.
----
ಸಂಸದ ರಮೇಶ ಜಿಗಜಿಣಗಿ ಅವರಿಗೆ ತವರು ತಾಲೂಕು ಇಂಡಿ ಪ್ರತಿ ಚುನಾವಣೆಯಲ್ಲಿ ಕೈಹಿಡಿಯುತ್ತ ಬಂದಿದೆ. ಅವರೊಬ್ಬ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿ, ಅಜಾತಶತ್ರುವಾಗಿ ಜಿಲ್ಲೆ, ರಾಜ್ಯ ರಾಜಕಾರಣದಲ್ಲಿ ಬೆಳೆದು ಬಂದಿದ್ದಾರೆ. ಇಂಡಿ ತಾಲೂಕಿನ ಮತದಾರರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗಿಂತ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಿಜೆಪಿಗೆ ಬಿಳುವ ಮತಗಳಿಗಿಂತ ಹೆಚ್ಚು ಮತಗಳು ನೀಡುತ್ತಾ ಬಂದಿದ್ದಾರೆ.