ಬಿಜೆಪಿ, ಆರ್ ಎಸ್ಎಸ್ ಸಾಮಾಜಿಕ ನ್ಯಾಯಕ್ಕೆ ಬದ್ಧ

KannadaprabhaNewsNetwork |  
Published : Dec 19, 2023, 01:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ ತರಾಸು ರಂಗಮಂದಿರದಲ್ಲಿ ಸೋಮವಾರ ನಡೆದ ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಗೋವಿಂದ ಕಾರಜೋಳ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಕೆಲವರು ಒಳಮೀಸಲಾತಿ ಬಗ್ಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡಾ ತಪ್ಪು ತಿಳುವಳಿಕೆ ಮೂಡಿಸುತ್ತಿದೆ ಎಂದು ಆರೋಪಿಸಿದರು.

ಮಾದಿಗರ ಆತ್ಮಗೌರವ ಸಮಾವೇಶದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಸಮರ್ಥನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಕೆಲವರು ಒಳಮೀಸಲಾತಿ ಬಗ್ಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡಾ ತಪ್ಪು ತಿಳುವಳಿಕೆ ಮೂಡಿಸುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ನಡೆದ ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಲಾಢ್ಯರ ನಡುವೆ ಶೋಷಿತರು ಮೀಸಲಾತಿ ಪಡೆಯುವುದು ಕಷ್ಟ. ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸದಾಶಿವ ಆಯೋಗ ರಚಿಸಿ ಅನುದಾನ, ಸಿಬ್ಬಂದಿ ಕೊಡಲಿಲ್ಲ. ನಾಲ್ಕುವರೆ ವರ್ಷಗಳ ಕಾಲ ರಾಜ್ಯದಲ್ಲಿ ಸುತ್ತಾಡಿ ವರದಿ ನೀಡಲಾಯಿತು. 2013ರಲ್ಲಿ ಚುನಾವಣೆ ಎದುರಾದಾಗ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆಂದು ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸಿ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷಗಳ ಕಾಲ ತಿರುಗಿ ನೋಡಲಿಲ್ಲ. ಇನ್ನಾದರೂ ಪರಿಶಿಷ್ಟ ಜಾತಿ ಜನಾಂಗ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.ಸದಾಶಿವ ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಯಲ್ಲಿನ 101 ಒಳಜಾತಿಗಳಲ್ಲಿ ಯಾರನ್ನು ತೆಗೆದು ಹಾಕುವುದಿಲ್ಲ. ಜನಸಂಖ್ಯೆ ಗನುಗುಣವಾಗಿ ಆಯಾ ಜಾತಿಗೆ ಸಿಗಬೇಕಾದ ಮೀಸಲಾತಿ ದೊರಕಲಿ. ನಮ್ಮದೇನು ಅಭ್ಯಂತರವಿಲ್ಲ. ಭೋವಿ, ಲಂಬಾಣಿ ಜನಾಂಗದವರಲ್ಲಿ ತಪ್ಪು ತಿಳುವಳಿಕೆ ಮೂಡಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಲಿತರನ್ನು ವಂಚಿಸುತ್ತಲೆ ಬರುತ್ತಿದೆ ಎಂದರು.

ಉಚಿತವಾಗಿ ಅಕ್ಕಿ, ರಾಗಿ, ಎರಡು ಸಾವಿರ ರು. ಆಸೆಯಿಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಬಲಿಯಾಗಬೇಡಿ. ಎಸ್ಸಿಪಿ. ಟಿಎಸ್ಪಿ. ಹಣವನ್ನು ಐದು ಉಚಿತ ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಜ.17ರಂದು ಸುಪ್ರೀಂಕೋರ್ಟ್‍ನಲ್ಲಿ ಏಳು ಸದಸ್ಯರುಳ್ಳ ಬೆಂಚ್‍ಗೆ ಮೀಸಲಾತಿ ಕೇಸ್ ಬರಲಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ. ಹೈದರಾಬಾದ್‍ನ ಸಿಕಂದರಾಬಾದ್‍ನಲ್ಲಿ ನಡೆದ ಮಾದಿಗರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರಮೋದಿ ದಲಿತರ ಪರವಾಗಿರುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್‍ನಂತೆ ವಂಚನೆ ಮಾಡುವ ಪಕ್ಷ ನಮ್ಮದಲ್ಲ ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ ಮಾತನಾಡಿ ಶಿಕ್ಷಣ, ಉದ್ಯೋಗ, ರಾಜಕೀಯ ಅಧಿಕಾರದಿಂದ ನಮ್ಮವರು ವಂಚನೆಗೊಳಗಾಗು ತ್ತಲೆ ಬರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅನೇಕ ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕೂಡಲ ಸಂಗಮದಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ಬಂದಿತು. ದಲಿತರು, ಅಸೃಶ್ಯರು ಒಳ ಮೀಸಲಾತಿ ಬಗ್ಗೆ ಕೆಲವರು ತಪ್ಪು ತಿಳುವಳಿಕೆ ಮೂಡಿಸುತ್ತಿರುವುದರ ವಿರುದ್ಧ ಎಚ್ಚರದಿಂದಿರಿ ಎಂದು ಮನವಿ ಮಾಡಿದರು.

ಗುರುನಾಥ್ ದ್ಯಾಮವ್ವನವರ್ ಒಳ ಮೀಸಲಾತಿ ಕುರಿತು ಮಾತನಾಡಿದರು. ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಬು ದೊಡ್ಮನಿ, ಬಿ.ಆರ್.ಮುನಿರಾಜು, ಹುಲ್ಲೂರು ಕುಮಾರ್, ಡಿಎಸ್.ಎಸ್ ಮುಖಂಡ ಮಹಾಂತೇಶ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ನಿವೃತ್ತ ಕೆಎಎಸ್.ಅಧಿಕಾರಿ ಪರಶುರಾಮ್, ರಾಜಣ್ಣ, ಡಿ.ಓ ಮುರಾರ್ಜಿ ವೇದಿಕೆಯಲ್ಲಿದ್ದರು.

-------------

ಸಿದ್ದರಾಮಯ್ಯ ಮೋಸಗಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸಗಾರ, ದಲಿತರ ಪರವಾಗಿಲ್ಲ ಎಂದು ಗೋವಿಂದ ಕಾರಜೋಳ ಹೇಳಿದರು. ಬಿಜೆಪಿ ವತಿಯಿಂದ ರಾಜ್ಯಮಟ್ಟದ ಸಭೆ ಕರೆದು ಸದಾಶಿವ ಆಯೋಗದ ವರದಿ ಒಳ ಮೀಸಲಾತಿ ಜಾರಿಯಿಂದ ಆಗುವ ಲಾಭವನ್ನು ತಿಳಿಸಲಾಗುವುದು. ಇಲ್ಲಿಯವರೆಗೂ ದಲಿತರು ಕಾಂಗ್ರೆಸ್‍ಗೆ ಮತ ನೀಡುತ್ತ ಬಂದಿದ್ದರು. ದಲಿತರು, ಅಸ್ಪೃಶ್ಯರನ್ನು ವಿದ್ಯಾವಂತರನ್ನಾಗಿ ಮಾಡುವುದು ಕಾಂಗ್ರೆಸ್‍ಗೆ ಇಷ್ಟವಿಲ್ಲ. ಒಳ ಮೀಸಲಾತಿ ಜಾರಿಗೆ ಬಂದರೆ ಪರಿಶಿಷ್ಟ ಜಾತಿಯಲ್ಲಿನ ನೂರ ಒಂದು ಜಾತಿಯ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ತಿಳಿಸಿದರು.

-------------------

ಎಸ್‌ಸಿ ಪಟ್ಟಿಯಲ್ಲಿನ ಜಾತಿಗಳ ಸಂಖ್ಯೆ 6 ರಿಂದ 100ಕ್ಕೇರಿಸಿದ್ದು ಕಾಂಗ್ರೆಸ್‌

ಅಸ್ಪೃಶ್ಯರು, ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಬೇಕೆಂಬ ಉದ್ದೇಶದಿಂದ ಮೀಸಲಾತಿ ಕೊಡಬೇಕೆಂದು 1950ರಲ್ಲಿ ಆದೇಶ ಜಾರಿಗೆ ತಂದಾಗ ಪರಿಶಿಷ್ಟ ಜಾತಿಯಲ್ಲಿ ಕೇವಲ ಆರು ಜಾತಿಗಳು ಮಾತ್ರ ಇದ್ದವು. ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ 101 ಜಾತಿಗಳನ್ನು ಸೇರಿಸಿದ ಪರಿಣಾಮ ಮೀಸಲಾತಿಗಾಗಿ ಕಳೆದ 32 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ.

- ಗೋವಿಂದ ಕಾರಜೋಳ ಮಾಜಿ ಸಚಿವ-------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ