ಶಿವಮೊಗ್ಗ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ನಗರದ ಗೋಪಿವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅರಣ್ಯ ಕಾನೂನಿನ ನೆಪದಲ್ಲಿ ಅರಣ್ಯ ಇಲಾಖೆಯವರು ರೈತರ ಸಾಗುವಳಿ ಭೂಮಿ ತೆರವಿಗೆ ನೋಟಿಸ್ ನೀಡುತ್ತಿದ್ದಾರೆ. ನಿರಂತರವಾಗಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರೈತರಿಗೆ ನೋಟಿಸ್ ನೀಡುತ್ತಿದ್ದರೂ ಉಡಾಫೆ ಉತ್ತರ ನೀಡಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ರೈತರಿಗೂ ನೋಟಿಸ್ ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರಿಗೆ ನೋಟಿಸ್ ನೀಡಿ ತೆರವು ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ. ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅರಣ್ಯ ಇಲಾಖೆಯವರು ರೈತರಿಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಕಂದಾಯ ಗೋಮಾಳ ಜಾಗವನ್ನು ಡಿಮ್ಡ್ ಫಾರೆಸ್ಟ್ ಮಾಡುತ್ತಿದ್ದಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ ಬಗರ್‌ಹುಕುಂ ಕಮಿಟಿ ಮುಂದೆ ಅರ್ಜಿಗಳು ಬರುತ್ತಿಲ್ಲ. ಅರ್ಹತೆ ಇರುವ ಅರ್ಜಿಗಳು ಡಿಮ್ಡ್ ಫಾರೆಸ್ಟ್‌ನಲ್ಲಿವೆ ಅಂತ ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ಹೀಗಾದರೆ ರೈತರಿಗೆ ನ್ಯಾಯ ಒದಗಿಸುವುದು ಹೇಗೆ ಅಧಿಕಾರಿಗಳು ಲಕ್ಷಗಟ್ಟಲೆ ಸಂಬಳ ತೆಗೆದುಕೊಂಡು ರೈತರ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಆಶೋಕ್ ನಾಯ್ಕ್, ಮಾಜಿ ಶಾಸಕ ಬಿ.ಸ್ವಾಮಿರಾವ್, ಕೆ.ಬಿ.ಕುಮಾರಸ್ವಾಮಿ, ಮುಖಂಡರಾದ ಎಸ್.ದತ್ತಾತ್ರಿ, ಸಿದ್ದಲಿಂಗಪ್ಪ, ಮಲ್ಲಿಕಾರ್ಜುನ ಹಕ್ರೆ, ಹುನಗೋಡು ರತ್ನಾಕರ್ ಇತರರಿದ್ದರು.