ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿಗರ ಯತ್ನ

KannadaprabhaNewsNetwork |  
Published : Aug 25, 2026, 02:15 AM IST
ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಹಾಗೂ ಶಾಸಕರು ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿಯಾಗಿರುವ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಹಾಗೂ ಶಾಸಕರು ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.ಈ ವೇಳೆ ಮಾತನಾಡಿದ ವಿಜಯೇಂದ್ರ, ಭ್ರಷ್ಟ ಸಚಿವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಅವರು ರಾಜೀನಾಮೆ ನೀಡುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ನಮ್ಮ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ನಮ್ಮ ಹೋರಾಟ ಹತ್ತಿಕ್ಕಲು ಹೋಗಬೇಡಿ. ಸದನ ಮುಗಿದ ನಂತರವೂ ನಮ್ಮ ಹೋರಾಟ ಮುಂದುವರೆಯುತ್ತದೆ. ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ದಲಿತರ ಪರವಾಗಿ ಮತ್ತು ಧ್ವನಿ ಇಲ್ಲದವರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಇಲ್ಲಿಗೇ ನಿಲ್ಲದು ಎಂದರು.ಮುಖ್ಯಮಂತ್ರಿಗಳು ನಮ್ಮನ್ನು ಗೂಂಡಾಗಳೆಂದು ಕರೆದಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ನೀವು ಗೂಂಡಾಗಳು. ಇದು ನಾಗೇಂದ್ರ ಒಬ್ಬರ ಪ್ರಶ್ನೆಯಲ್ಲ. ದಲಿತರ ಹಣ ಕೊಳ್ಳೆ ಹೊಡೆದ ಸಚಿವರನ್ನು ದಲಿತರ ಹೆಸರು ಹೇಳಿಕೊಂಡು ರಕ್ಷಣೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡುವುದು ಎಷ್ಟು ಅಪರಾಧವೋ ಭ್ರಷ್ಟರನ್ನು ಬೆಂಬಲಿಸುವುದು ಮಹಾ ಅಪರಾಧ ಎಂದು ಹೇಳಿದರು.ಅಶೋಕ್‌ ಅವರು ಮಾತನಾಡಿ, ನಾಗೇಂದ್ರ ಅವರ ವಿರುದ್ಧ ಸ್ಪಷ್ಟ ಆರೋಪಗಳಿದ್ದರೂ ಸಾಕ್ಷ್ಯಾಧಾರವಿದ್ದರೂ ಅವರನ್ನು ವಜಾ ಮಾಡದೇ ವಿಳಂಬ ಮಾಡುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಇದು ದಲಿತರ ಹಣ ನುಂಗಿದ ಸರಕಾರ. ಇವರು ಆರೋಪಿಯನ್ನೇ ಸಚಿವರನ್ನಾಗಿ ಮಾಡಿದ್ದು ಸರಿಯಲ್ಲ ಎಂದು ಟೀಕಿಸಿದರು. ಕೂಡಲೇ ನಾಗೇಂದ್ರರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿದರು. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.ಇದೇ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರು ಮತ್ತು ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

46 ಭಾರತ ಜೋಡೋ ಯುವಕ ಸಂಘ ಸ್ಥಾಪನೆ
ಸಮಾಜದ ಉನ್ನತಿಗೆ ಶ್ರಮಿಸಿದ ತೋಂಟದಾರ್ಯ ಶ್ರೀ