ಗದ್ದಲದ ನಡುವೆ ಮಸೂದೆಗಳ ಪಾಸ್‌!

KannadaprabhaNewsNetwork |  
Published : Aug 25, 2026, 02:15 AM IST
ಸದನ ಕಲಾಪ | Kannada Prabha

ಸಾರಾಂಶ

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಅನುಮೋದನೆ ಹಾಗೂ ಸೌಲಭ್ಯ ಒದಗಿಸುವ ವ್ಯವಸ್ಥೆಯನ್ನು ಏಕೀಕೃತ ಡಿಜಿಟಲ್‌ ವ್ಯವಸ್ಥೆಯಾಗಿ ರೂಪಿಸಲು ಅನುವಾಗುವ ಕರ್ನಾಟಕ ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ-2026 ಸೇರಿದಂತೆ ವಿವಿಧ ವಿಧೇಯಕಗಳಿಗೆ ಸೋಮವಾರ ಉಭಯ ಸದನಗಳಲ್ಲಿ ತೀವ್ರ ಗದ್ದಲದ ನಡುವೆ ಅಂಗೀಕಾರ ದೊರೆತಿದೆ.

ಕನ್ನಡಪ್ರಭ ವಾರ್ತೆ, ವಿಧಾನಮಂಡಲ

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಅನುಮೋದನೆ ಹಾಗೂ ಸೌಲಭ್ಯ ಒದಗಿಸುವ ವ್ಯವಸ್ಥೆಯನ್ನು ಏಕೀಕೃತ ಡಿಜಿಟಲ್‌ ವ್ಯವಸ್ಥೆಯಾಗಿ ರೂಪಿಸಲು ಅನುವಾಗುವ ಕರ್ನಾಟಕ ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ-2026 ಸೇರಿದಂತೆ ವಿವಿಧ ವಿಧೇಯಕಗಳಿಗೆ ಸೋಮವಾರ ಉಭಯ ಸದನಗಳಲ್ಲಿ ತೀವ್ರ ಗದ್ದಲದ ನಡುವೆ ಅಂಗೀಕಾರ ದೊರೆತಿದೆ.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದರು.

ಸಭಾಧ್ಯಕ್ಷರಿಗೆ ಪತ್ರ ನೀಡಿದ್ದೇನೆ ನಾಗೇಂದ್ರ ರಾಜೀನಾಮೆ ಕುರಿತು ಚರ್ಚಿಸಲು ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು.ಸಚಿವ ಕೃಷ್ಣಬೈರೇಗೌಡ, ಬಿಜೆಪಿ ಸದಸ್ಯರು ಧರಣಿಯಲ್ಲಿದ್ದಾರಾ ಅಥವಾ ಚರ್ಚೆಯಲ್ಲಿದ್ದಾರಾ? ನಿಮಗೆ ಧೈರ್ಯವಿದ್ದರೆ ಚರ್ಚೆಗೆ ಬನ್ನಿ. ನೋಟಿಸ್ ಕೊಟ್ಟು ಚರ್ಚೆಗೆ ಬನ್ನಿ. ನೋಟಿಸ್‌ ನೀಡಲು ಧೈರ್ಯವಿಲ್ಲದ ಯೋಗ್ಯತೆಯಿಲ್ಲದ ರಣಹೇಡಿಗಳು ನೀವು ಎಂದು ಕಿಡಿಕಾರಿದರು. ಆಗ ಅಶೋಕ್, 187 ಕೋಟಿ ರು.ಗಳನ್ನು ಲೂಟಿ ಹೊಡೆದು ಕಾಂಗ್ರೆಸ್‌ನವರೆಲ್ಲರೂ ಹಂಚಿಕೊಂಡಿದ್ದಾರೆ. ಈ ಭಂಡ ಸರ್ಕಾರಕ್ಕೆ ಒಂದು ವಾರದಿಂದ ಒತ್ತಾಯಿಸುತ್ತಿದ್ದರೂ ಸಚಿವರ ರಾಜೀನಾಮೆ ಪಡೆಯುತ್ತಿಲ್ಲ. ನಾವು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಘೋಷಿಸಿದರು.

ಈ ವೇಳೆ ಆರೋಪ ಪ್ರತ್ಯಾರೋಪ, ಗದ್ದಲದ ನಡುವೆಯೇ ಸಚಿವ ಡಾ.ಜಿ. ಪರಮೇಶ್ವರ್‌, ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ವಿವಿಧ ಸಚಿವರು ವಿಧೇಯಕಗಳನ್ನು ಪರ್ಯಾಲೋಚನೆಗೆ ಮಂಡಿಸಿದರು. ಈ ವೇಳೆ ಯಾವುದೇ ಚರ್ಚೆಯಿಲ್ಲದೆ ಒಟ್ಟು 8 ವಿಧೇಯಕಗಳಿಗೆ ಅಂಗೀಕಾರ ದೊರೆಯಿತು.

ಸದೃಢ ಏಕಗವಾಕ್ಷಿ ವ್ಯವಸ್ಥೆ:

ಕೈಗಾರಿಕಾ ಅನುಮೋದನೆಗಳು ಮತ್ತು ಸೇವೆಗಳನ್ನು ಸಮಗ್ರವಾಗಿ ಒದಗಿಸಲು ಏಕಗವಾಕ್ಷಿ ವ್ಯವಸ್ಥೆಯನ್ನು ಬಲಪಡಿಸುವುದು. ಹೂಡಿಕೆದಾರರು ತಮ್ಮ ಕೈಗಾರಿಕಾ ಯೋಜನೆಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳು ಮತ್ತು ಅನುಸರಣೆಗಳನ್ನು ಮುಂಚಿತವಾಗಿ ಗುರುತಿಸಿಕೊಳ್ಳಲು ‘Know Your Approvals (KYA)’ ವ್ಯವಸ್ಥೆಯನ್ನು ಪರಿಚಯಿಸುವುದು. ಸುರಕ್ಷಿತ ಕೆವೈಸಿ ದತ್ತಾಂಶ ಸಂಗ್ರಹಣಾ ವ್ಯವಸ್ಥೆಯ ಮೂಲಕ ಈಗಾಗಲೇ ಸರ್ಕಾರದ ಬಳಿ ಲಭ್ಯವಿರುವ ದಾಖಲೆಗಳನ್ನು ಪುನಃ ಪುನಃ ಸಲ್ಲಿಸುವ ಅಗತ್ಯವನ್ನು ಕಡಿಮೆ ಮಾಡುವ ‘ಒನ್ಸ್ ಓನ್ಲಿ’ ದಾಖಲೆ ಸಲ್ಲಿಕೆ ವ್ಯವಸ್ಥೆ ಜಾರಿಗೆ ತರಲು ವಿಧೇಯಕದ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಭೂ ಕಂದಾಯ ತಿದ್ದುಪಡಿ:

ಇದೇ ವೇಳೆ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲಾಯಿತು.

ಈ ತಿದ್ದುಪಡಿ ಮಸೂದೆಯಲ್ಲಿ ದುಷ್ಟ್ರೇರಣೆ, ‘ಎಲೆಕ್ಟ್ರಾನಿಕ್ ದಾಖಲೆಗಳ ಸ್ವೀಕಾರಾರ್ಹತೆ’, ‘ಪರಭಾರೆ ಮಾಡಿದ’, ‘ವಂಚನೆ’, ‘ನಕಲಿ ದಾಖಲೆ ಸೃಷ್ಟಿ, ‘ಅಮೂಲ್ಯ ಜವಾಬ್ದಾರಿ/ಬೆಲೆಬಾಳುವ ಭದ್ರತಾ ಪತ್ರ’ ಪದಗಳನ್ನು ವ್ಯಾಖ್ಯಾನಿಸುವುದು ಮತ್ತು ‘ಪ್ರಮಾಣೀಕೃತ ಪ್ರತಿ’ ಎಂಬ ಪದವನ್ನು ಮರುವ್ಯಾಖ್ಯಾನಿಸಲು ಪ್ರಸ್ತಾಪಿಸಲಾಗಿದೆ. ಇದಲ್ಲದೆ ಕರ್ನಾಟಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ- 2026 ವಿಧೇಯಕಕ್ಕೆ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿದೆ.

ಇದರ ಪ್ರಕಾರ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮಾದರಿಯ ಶುಲ್ಕ ಪಾವತಿ ವಿಧಾನವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೂಲ ಅಧಿನಿಯಮಕ್ಕೆ ಪ್ರಕರಣ 6B ಮತ್ತು 6C ಅನ್ನು ಸೇರ್ಪಡೆಗೊಳಿಸುವ ಮೂಲಕ ಸೇವಾ ಪ್ರಮಾಣ ಪತ್ರ ನೀಡುವುದು ಮತ್ತು ದಾಖಲೆಗಳನ್ನು ತಡೆಹಿಡಿಯುವುದನ್ನು ನಿಷೇಧಿಸಲು ಪ್ರಸ್ತಾಪಿಸಲಾಗಿದೆ.

ಸುಲಭ ವ್ಯಾಪಾರಕ್ಕಾಗಿ ವಿಶ್ವಾಸಾರ್ಹ ಆಡಳಿತವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ ಸಹ ಚರ್ಚೆ ಇಲ್ಲದೆ ಅಂಗೀಕಾರಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

46 ಭಾರತ ಜೋಡೋ ಯುವಕ ಸಂಘ ಸ್ಥಾಪನೆ
ಸಮಾಜದ ಉನ್ನತಿಗೆ ಶ್ರಮಿಸಿದ ತೋಂಟದಾರ್ಯ ಶ್ರೀ