ಸರ್ಕಾರ ಬೀಳಿಸುವ ಬಿಜೆಪಿ ಪ್ರಯತ್ನ ಫಲಿಸಲ್ಲ: ಸಚಿವ ಮಧು

KannadaprabhaNewsNetwork |  
Published : Mar 03, 2024, 01:32 AM IST
ಪೊಟೋ: 2ಎಸ್‌ಎಂಜಿಕೆಪಿ05ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನಾಚರಣೆ ಹಿನ್ನಲೆ ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ತಯಾರಿಸಿದ ವಿಶೇಷ ಕೇಕ್‌. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಬಿಜೆಪಿಯವರ ಯಾವ ಪ್ರಯತ್ನವೂ ಸಫಲ ಆಗುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎನ್ನುತ್ತಾರೆ. ಹೌದು, ಗ್ಯಾರಂಟಿ ಯೋಜನೆಗಳ ಕಾರಣದಿಂದಲೇ ಕಾಂಗ್ರೆಸ್‌ ಅಧಿಕಾರಲ್ಲಿದೆ. ಬಿಜೆಪಿಯವರ ಮನೆಯಲ್ಲಿ ಕೂಡ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಬಿಜೆಪಿಯವರ ಯಾವ ಪ್ರಯತ್ನವೂ ಸಫಲ ಆಗುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎನ್ನುತ್ತಾರೆ. ಹೌದು, ಗ್ಯಾರಂಟಿ ಯೋಜನೆಗಳ ಕಾರಣದಿಂದಲೇ ಕಾಂಗ್ರೆಸ್‌ ಅಧಿಕಾರಲ್ಲಿದೆ. ಬಿಜೆಪಿಯವರ ಮನೆಯಲ್ಲಿ ಕೂಡ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿದ್ದಾರೆ. ಬಿಜೆಪಿಯವರು ಭಾವನಾತ್ಮಕ, ಸೂಕ್ಷ್ಮ ವಿಷಯಗಳು ಡೂಪ್ಲಿಕೇಟ್ ಆಗಿವೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಮಾಡಿದ್ದಾರೆ. ಸಿದ್ದರಾಮಯ್ಯನವರ ಗ್ಯಾರಂಟಿ ಮುಂದೆ ಮೋದಿ ಗ್ಯಾರಂಟಿಯನ್ನು ಜನರು ಓಡಿಸುತ್ತಾರೆ ಎಂದು ಕುಟುಕಿದರು.

ರಾಜ್ಯ ಬಿಜೆಪಿ ಅಧ್ಯಕ್ಷರು ಶೇ.20ರಷ್ಟು ಜನರಿಗೂ ಗ್ಯಾರಂಟಿ ಯೋಜನೆ ತಲುಪಿಲ್ಲ ಎಂದು ಹೇಳಿದ್ದಾರೆ. ಅವರ ತೋಟದ ಮನೆ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಗ್ಯಾರಂಟಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಈಗ ಭಾವನಾತ್ಮಕತೆ ಎಲ್ಲ ಹೋಗಿದೆ, ಅದು ಡೂಪ್ಲಿಕೇಟ್ ಎಂದು ಜನರಿಗೆ ಗೊತ್ತಾಗಿದೆ. ವಿಧಾನಸಭಾ ಚುನಾವಣೆ ವೇಳೆ ಜನರಿಗೆ ಹೊಟ್ಟೆ ಹಸಿದಿತ್ತು. ಹಾಗಾಗಿ ನಮ್ಮನ್ನು ಪುರಸ್ಕರಿಸಿದ್ದಾರೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಜೈ ಆಂಜನೇಯ ಅಂದಿದ್ದರು. ಆದರೂ ಸೋತರು, ಏಕೆಂದರೆ ಮೋದಿ, ಬಿಜೆಪಿಯವರ ಮೇಲೆ ಆಂಜನೇಯನಿಗೆ ವಿಶ್ವಾಸವಿರಲಿಲ್ಲ. ನಮ್ಮ ಮೇಲೆ ಇತ್ತು. ವಿಧಾನಸಭೆ ರೀತಿ ಲೋಕಸಭೆಯಲ್ಲೂ ಗೆದ್ದು ಕಾಂಗ್ರೆಸ್‌ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕೊನೆವರೆಗೂ ನಿಮ್ಮ ಜೊತೆ ಇರುತ್ತೇನೆ:

ಮಕ್ಕಳು ದೇವರು ಸಮಾನ. ಶಿಕ್ಷಣ ಸಚಿವನಾಗಿ ದೇವರ ಸ್ಥಾನದಲ್ಲಿರುವ ಮಕ್ಕಳ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಒಬ್ಬ ಬಂಗಾರಪ್ಪನವರನ್ನು ಕಳೆದುಕೊಂಡರೂ ಲಕ್ಷಾಂತರ ಸಂಖ್ಯೆಯಲ್ಲಿ ಬಂಗಾರಪ್ಪನವರನ್ನು ನಿಮ್ಮ ರೂಪದಲ್ಲಿ ಕೊಟ್ಟಿದ್ದಾನೆ. ನನ್ನ ಕೊನೆ ಉಸಿರು ಇರೋವರೆಗೆ ನಿಮ್ಮ ಜೊತೆ ಇರುತ್ತೇನೆ ಎಂದು ಸಚಿವರು ಹೇಳಿದರು.

ಗೀತಾ ಅವಶ್ಯಕತೆ ಪಕ್ಷಕ್ಕಿದೆ:

ಮುಂಬರುವ ಲೋಕಸಭಾ ಚುನಾವಣೆಗೆ ಗೀತಾ ಶಿವರಾಜಕುಮಾರ್‌ ಸೇರಿದಂತೆ ಕೇಂದ್ರಕ್ಕೆ ಹಲವರ ಹೆಸರನ್ನು ಕಳಿಸಲಾಗಿದೆ. ಬಳ್ಳಾರಿಯಲ್ಲಿ ಶಕ್ತಿ ಯೋಜನೆಗೆ ಶಕ್ತಿ ಕೊಟ್ಟಿದ್ದೇ ಗೀತಾ ಶಿವರಾಜಕುಮಾರ್. ಹೀಗಾಗಿ, ಅವರ ಅವಶ್ಯಕತೆ ನನಗೆ ಮತ್ತು ನಮ್ಮ ಪಕ್ಷಕ್ಕೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಿವರಾಜಕುಮಾರ್ ಪ್ರಚಾರ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಯ ಪರ ಚುನಾವಣೆ ನಡೆಸಲಿದ್ದಾರೆ ಎಂದ ಅವರು, 2010 ರಲ್ಲಿ ತಂದೆ ಬಂಗಾರಪ್ಪ ಅವರು ಸೋಲನ್ನು ಅನುಭವಿಸಿದ್ದರು. ಆದರೆ, ಅದೇ ಕಾಂಗ್ರೆಸ್ ಪಕ್ಷ 2024ರ ಲೋಕಸಭಾ ಚುನಾವಣೆಯಲ್ಲಿ ಪುನಃ ಗೆಲುವು ಸಾಧಿಸಲಿದೆ ನೋಡುತ್ತಿರಿ ಎಂದು ಮಧು ಬಂಗಾರಪ್ಪ ಭವಿಷ್ಯ ನುಡಿದರು.

ಸುದ್ದಿಗೋಷ್ಟಿಯಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮುಖಂಡರಾದ ಎಂ.ಶ್ರೀಕಾಂತ್, ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್ ಸೇರಿದಂತೆ ಹಲವರಿದ್ದರು.

- - - ಬಾಕ್ಸ್‌-1ಸಾವಲ್ಲೂ ಮತ ಕೇಳುವ ಬಿಜೆಪಿ ಬೆಂಗಳೂರಿನ ಬಾಂಬ್ ಸ್ಪೋಟ ಪ್ರಕರಣ ವಿಚಾರ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಲ್ಲಿ ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇವೆ. ವಿಧಾನಸೌಧದೊಳಗೆ ಮತ್ತು ಹೊರಗೆ ಎಂಬುದು ಇಲ್ಲ. ಇಂಟೆಲಿಜೆನ್ಸ್ ಫೇಲಾಗಿತ್ತು ಎನ್ನುವ ಬಿಜೆಪಿಯವರು ಪುಲ್ವಾಮ ದಾಳಿಯಾದಾಗ ಯಾವ ಫೇಲ್ಯೂರ್‌ ಆಗಿತ್ತು ಎಂಬುದನ್ನು ತಿಳಿಸಬೇಕು. ಸಾವಲ್ಲೂ ಮತ ಕೇಳುವ ವ್ಯವಸ್ಥೆ ಬಿಜೆಪಿಯರದು ಎಂದು ಸಚಿವ ಮಧು ಬಂಗಾರಪ್ಪ ಹರಿಹಾಯ್ದರು.

ಮಾ.5ರಂದು ಸಾಗರದಲ್ಲಿ ನಡೆಯಲಿರುವ ಈಡಿಗರ ಸಮಾವೇಶಕ್ಕೆ ಆಹ್ವಾನ ಬಂದರೆ ಹೋಗುತ್ತೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- - - ಬಾಕ್ಸ್-2

ಮಧು ಬಂಗಾರಪ್ಪಗೆ ಜನ್ಮದಿನದ ಸಂಭ್ರಮ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಮ್ಮ 57ನೇ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. ಈ ಸಂದರ್ಭ ಖ್ಯಾತ ಚಲನ ಚಿತ್ರನಟ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಮಧು ಬಂಗಾರಪ್ಪ ಅವರನ್ನು ನಗರದ ಸೋಗಾನೆ ವಿಮಾನ ನಿಲ್ದಾಣದಿಂದ ಕಾರುಗಳ ಬೃಹತ್ ಮೆರವಣಿಗೆ ಮೂಲಕ ಎಂ.ಆರ್.ಎಸ್. ಸರ್ಕಲ್, ಬೆಕ್ಕಿನ ಕಲ್ಮಠ ಸರ್ಕಲ್ ಮೂಲಕ ಅಮೀರ್ ಅಹ್ಮದ್ ವೃತ್ತ , ಗೋಪಿ ವೃತ್ತ, ದುರ್ಗಿಗುಡಿ ಮೂಲಕ ದೈವಜ್ಞ ಸರ್ಕಲ್, ಜೈಲ್ ರಸ್ತೆ ಮೂಲಕ ಲಕ್ಷ್ಮೀ ಟಾಕೀಸ್, ವಿನೋಬನಗರ ಪೊಲೀಸ್ ಚೌಕಿ, ಕರಿಯಣ್ಣ ಕಾಂಪ್ಲೆಕ್ಸ್‌ನಿಂದ ವಿನೋಬನಗರ ನಿವಾಸಕ್ಕೆ ಕರೆತರಲಾಯಿತು.

ಸಚಿವ ಮಧು ಬಂಗಾರಪ್ಪ ಅವರೊಂದಿಗೆ ನಟ ಡಾ. ಶಿವರಾಜಕುಮಾರ್‌, ಗೀತಾ ಶಿವರಾಜ್ ಕುಮಾರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳಿದ್ದರು.

- - - ಬಾಕ್ಸ್-3 ತಮ್ಮನಿಗಾಗಿ ವಿಶೇಷ ಕೇಕ್ ತಯಾರಿಸಿದ ಅಕ್ಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜನ್ಮದಿನ ಅಂಗವಾಗಿ ಶನಿವಾರ ಶಿವಮೊಗ್ಗದ ಮಧು ಬಂಗಾರಪ್ಪ ನಿವಾಸದಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಅವರಿಗೆ ಸಹೋದರಿ ಗೀತಾ ಶಿವರಾಜಕುಮಾರ್ ವಿಶೇಷವಾಗಿ ಕೇಕ್ ತಯಾರಿಸಿ ತಂದಿದ್ದರು. ಈ ಕೇಕ್‌ ಅನ್ನು ಗೀತಾ ಶಿವರಾಜ್‌ಕುಮಾರ್‌ ಅವರೇ ತಯಾರಿಸಿದ್ದು ಎಂಬುದು ವಿಶೇಷ.

ಸಂಭ್ರಮಾಚರಣೆಯಲ್ಲಿ ಮಾತನಾಡಿದ ನಟ ಶಿವರಾಜಕುಮಾರ್, ಮಧು ಅವರಿಗಾಗಿ ಗೀತಾ ಬಹಳ ಪ್ರೀತಿಯಿಂದ ಈ ಕೇಕ್‌ ತಯಾರಿಸಿದ್ದಾರೆ. ಈ ಕೇಕ್ ಅನ್ನು ತಯಾರಿಸಲು ರಾತ್ರಿ 8 ಗಂಟೆಯಿಂದ ಬೆಳಗ್ಗೆ 4 ಗಂಟೆವರೆಗೆ ಸಮಯ ತೆಗೆದುಕೊಂಡಿದ್ದಾರೆ ಎಂದು ಹ್ಯಾಟ್ರಿಕ್‌ ಹೀರೋ ಕೇಕ್ ಸೀಕ್ರೆಟ್ ಬಗ್ಗೆ ತಿಳಿಸಿದರು.

- - - ಬಾಕ್ಸ್-4

ನಾನು ರಾಜಕೀಯಕ್ಕೆ ಬರುವುದಿಲ್ಲ: ನಟ ಶಿವರಾಜ್‌ಕುಮಾರ್‌

ರಾಜಕೀಯಕ್ಕೆ ಬರುವುದಿಲ್ಲ. ಆದರೆ, ರಾಜಕೀಯ ಶಕ್ತಿ ನೀಡುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರವನ್ನೂ ಮಾಡುತ್ತೇನೆ ಎಂದು ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್ ಕುಮಾರ್ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಸಚಿವ ಮಧು ಬಂಗಾರಪ್ಪ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ನಿ ಗೀತಾ ಅವರಿಗೆ ರಾಜಕೀಯ ಆಸಕ್ತಿ ಮತ್ತು ಆಸೆ ಎರಡೂ ಇದೆ. ಈಗಾಗಲೇ ಈ ಕ್ಷೇತ್ರದಲ್ಲಿ ಆಕೆ ಗುರುತಿಸಿಕೊಂಡಿದ್ದಾರೆ. ರಾಜಕೀಯ ಕುಟುಂಬದಿಂದ ಬಂದಿರುವ ಗೀತಾ ಅವರಿಗೆ ಸಹೋದರ ಮಧು ಅವರ ಸಹಕಾರದ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪಾಜಿ ಅವರ ಅಭಿಮಾನಿಗಳ ಆಶೀರ್ವಾದ ಇದೆ. ಈ ಬಾರಿ ಸ್ಪರ್ಧೆಗೆ ಅವಕಾಶ ಸಿಕ್ಕರೆ ಗೀತಾ ಬೆನ್ನಿಗೆ ನಿಂತು ಪ್ರಚಾರ ಮಾಡುವೆ ಎಂದು ಹೇಳಿದರು.

ಸಿನೆಮಾ ಬಗ್ಗೆ ಮಾತನಾಡಿದ ಅವರು, ವಿಷಯಾಧಾರಿತ ಸಿನೆಮಾಗಳನ್ನು ಮಾಡುತ್ತಿದ್ದೇನೆ. ಗೋಸ್ಟ್ ರೀತಿಯ ಮೂವಿ ಮಾಡಬೇಕು. ರಾಜ್ಯದಲ್ಲಿರುವ ಸ್ಟಾರ್ ವಾರ್ ಬಗ್ಗೆ ಮಾತನಾಡಿದ ಅವರು, ಈ ಬೆಳವಣಿಗೆ ಒಳ್ಳೆದಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ತಿಳಿಮಾಡುತ್ತೇವೆ. ಆದರೆ, ನೆಲ-ಜಲದ ವಿಷಯದಲ್ಲಿ ನಮ್ಮಲ್ಲಿ ಒಗ್ಗಟ್ಟಿದೆ. ತಮಿಳುನಾಡಿನಲ್ಲಿ ಸ್ಟಾರ್ ವಾರ್ ಇಲ್ಲ. ಆ ರೀತಿಯ ವಾತಾವರಣ ನಮ್ಮಲ್ಲೂ ಬರಲಿದೆ ಎಂದು ಶಿವಣ್ಣ ಹೇಳಿದರು.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, ನಾನು ಜಿಲ್ಲೆಯ ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ. ಮಾಧ್ಯಮಗಳ ಜತೆ ಮಾತನಾಡಿಲ್ಲ ಅಷ್ಟೆ. ನನ್ನ ಜಿಲ್ಲೆಯ ಜನರ ಪ್ರೀತಿ ನನ್ನ ಮೇಲಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಆಸೆ ಇದೆ. ಆದರೆ, ಪಕ್ಷದ ನಾಯಕರು ಏನು ತೀಮಾರ್ಮಾನ ಮಾಡಿದರೂ ಅದಕ್ಕೆ ಬದ್ಧಳಾಗಿ ಮಧು ಜತೆ ಪಕ್ಷಕ್ಕಾಗಿ ಕೆಲಸ ಮಾಡುವೆ ಎಂದು ಹೇಳಿದರು.

- - - -2ಎಸ್‌ಎಂಜಿಕೆಪಿ05:

ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನಾಚರಣೆ ಹಿನ್ನೆಲೆ ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ತಯಾರಿಸಿದ ವಿಶೇಷ ಕೇಕ್‌.

- - --2ಎಸ್‌ಎಂಜಿಕೆಪಿ06:

ಶಿವಮೊಗ್ಗದ ವಿನೋಬ ನಗರ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶನಿವಾರ ಜನ್ಮದಿನಾಚರಣೆ ಆಚರಿಸಿಕೊಂಡರು. ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ಪತ್ನಿ ಗೀತಾ ಶಿವರಾಜ್‌ಕುಮಾರ್‌, ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ