ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿಯವರು ದೀವರು, ಈಡಿಗ, ಬಿಲ್ಲವ, ನಾಮಧಾರಿ ಜೊತೆಗೆ ೨೬ ಪಂಗಡಗಳನ್ನು ಸೇರಿಸಿಕೊಂಡು ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸುತ್ತಿದೆ. ಹಾಗಾದರೆ, ಬಿಜೆಪಿಯವರಿಗೆ ಇತರೆ ಸಮುದಾಯಗಳ ಬೆಂಬಲ ಬೇಡವೇ ಎಂದು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ದೊಡ್ಡ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಅಧಿಕಾರದಲ್ಲಿ ಇದ್ದಾಗ ಎಲ್ಲ ಸಮುದಾಯದವರಿಗೂ ಯೋಜನೆ ಕೊಟ್ಟಿದ್ದಾರೆ. ಅಂತಹ ಮುತ್ಸದ್ಧಿಯನ್ನು ಜಾತಿಯೊಂದರ ಸಮಾವೇಶದಲ್ಲಿ ಸನ್ಮಾನಿಸುವುದು ಎಷ್ಟು ಸರಿ? ಎಲ್ಲ ಸಮುದಾಯಗಳ ಉಪಸ್ಥಿತಿಯಲ್ಲಿ ಅವರನ್ನು ಸನ್ಮಾನಿಸಿದ್ದರೆ ಹೆಚ್ಚು ಗೌರವ ಬರುತಿತ್ತು ಎಂದು ಹೇಳಿದರು.ಚುನಾವಣೆ ಸಂದರ್ಭ ಬಿಜೆಪಿಯವರು ಜಾತಿವಾದವನ್ನು ಪ್ರತಿಪಾದಿಸಿ, ಮತ ಗಳಿಸುವ ಪ್ರಯತ್ನ ನಡೆಸುತ್ತಾರೆ. ಒಂದೊಮ್ಮೆ ಅದರಲ್ಲಿ ಯಶಸ್ಸು ಕಾಣದೇ ಹೋದಲ್ಲಿ ಕೋಮುವಾದ ಬಿತ್ತುತ್ತಾರೆ. ಎಲ್ಲ ಜಾತಿ ಧರ್ಮವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಬಿಜೆಪಿ ಯಾವತ್ತೂ ಮಾಡಿಲ್ಲ. ಶಕ್ತಿಸಾಗರ ಸಂಗಮ ಕಾರ್ಯಕ್ರಮ ಸಹ ಜಾತಿ ನಡುವೆ ಕಂದಕ ಸೃಷ್ಟಿಸುವ ಬಿಜೆಪಿಯ ಮತ್ತೊಂದು ಪ್ರಯತ್ನವಾಗಿದೆ. ಚುನಾವಣೆಯಲ್ಲಿ ಮತಗಳಿಕೆ ವಾಮಮಾರ್ಗವೇ ಈ ಸಮಾವೇಶವಾಗಿದೆ. ಇಂತಹ ಸಮಾವೇಶ ಆರೋಗ್ಯಕರ ಸಮಾಜಕ್ಕೆ ಕಂಟಕವಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚೇತನರಾಜ್ ಕಣ್ಣೂರು, ಕಲಸೆ ಚಂದ್ರಪ್ಪ, ಉಷಾ ಎನ್., ಮಹಾಬಲ ಕೌತಿ, ಅಶೋಕ್ ಬೇಳೂರು, ದಿನೇಶ್, ಎಲ್.ಚಂದ್ರಪ್ಪ, ಗಿರೀಶ್ ಕೋವಿ, ಪ್ರದೀಪ್, ಮಂಡಗಳಲೆ ಗಣಪತಿ, ಗಣಾಧೀಶ್, ಯಶವಂತ ಪಣಿ, ತಾರಾಮೂರ್ತಿ, ಶ್ರೀಧರ ಪಟೇಲ್ ಇನ್ನಿತರರು ಹಾಜರಿದ್ದರು.