ಕಾರವಾರ:
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಕೆಲಸಗಳಲ್ಲಿ ಕರ್ತವ್ಯ ಲೋಪ ಮತ್ತು ದುರ್ನಡತೆ ತೋರಿದಲ್ಲಿ ಅಂತಹವರ ವಿರುದ್ಧ ಲೋಕಾಯಕ್ತ ಸಂಸ್ಥೆಯು ಅತ್ಯಂತ ಕಠಿಣ ಕ್ರಮಕೈಗೊಳ್ಳುತ್ತದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಎಚ್ಚರಿಕೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಾರ್ವಜನಿಕರ ಕುಂದು-ಕೊರತೆಗಳ ಸಾರ್ವಜನಿಕ ಅಹವಾಲು ಸ್ವೀಕಾರ, ಕುಂದು-ಕೊರತೆ, ದೂರು ವಿಚಾರಣೆ ಮತ್ತು ಪ್ರಕರಣ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು.ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿದಾಗ ಅವುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ತಮ್ಮ ಕಚೇರಿ ವ್ಯಾಪ್ತಿಗೆ ಒಳಪಡದ ಅರ್ಜಿಯಾಗಿದ್ದಲ್ಲಿ ಅದನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಈ ಬಗ್ಗೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಬೇಕು. ಸರ್ಕಾರಿ ನೌಕರರು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುವುದು, ಸ್ವಜನ ಪಕ್ಷಪಾತ, ದುರ್ನಡತೆ, ಅಶಿಸ್ತು, ಕಳಪೆ ಕಾಮಗಾರಿ, ಕರ್ತವ್ಯ ಲೋಪದಲ್ಲಿ ತೊಡಗಿದ್ದಲ್ಲಿ ಅಂತಹವರ ವಿರುದ್ಧ ಲೋಕಾಯುಕ್ತ ಕಾಯ್ದೆಯಡಿ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸರ್ಕಾರಿ ನೌಕರಿಗೆ ಸಾರ್ವಜನಿಕರ ಸೇವೆ ಮಾಡಲು ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರಾಮಾಣಿಕವಾಗಿ ಉತ್ತಮ ಸೇವೆ ಒದಗಿಸಬೇಕು. ಅವರಿಗೆ ನಿಮ್ಮ ಬಗ್ಗೆ ಸದಾಭಿಪ್ರಾಯ ಮೂಡುವಂತೆ ಮಾಡಿ, ಕಿರಿಯ ಅಧಿಕಾರಿಗಳು ತಪ್ಪು ಮಾಡಿದಲ್ಲಿ ಹಿರಿಯ ಅಧಿಕಾರಿಗಳು ಅದನ್ನು ಸರಿಪಡಿಸಬೇಕು. ಸಾರ್ವಜನಿಕ ಆಸ್ತಿ ರಕ್ಷಣೆ ನೌಕರರ ಪ್ರಥಮಾದ್ಯತೆಯಾಗಬೇಕು ಎಂದರು.ಸಾರ್ವಜನಿಕರು ಸರ್ಕಾರಿ ನೌಕರರ ವಿರುದ್ಧ ದೂರುಗಳನ್ನು ಸೂಕ್ತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು. ಲೋಕಾಯುಕ್ತ ವ್ಯಾಪ್ತಿಗೆ ಒಳಪಡುವ ದೂರುಗಳನ್ನು ಮಾತ್ರ ಲೋಕಾಯುಕ್ತ ಸಂಸ್ಥೆ ವಿಚಾರಣೆ ನಡೆಸಲಿದ್ದು, ಖಾಸಗಿ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ದೂರುಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗಿಲ್ಲ. ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ವೈಯಕ್ತಿಕ ಹಿತಾಸಕ್ತಿಗೆ ಸುಳ್ಳು ದೂರು ಸಲ್ಲಿಸುವ ಜನರ ವಿರುದ್ಧವೂ ಕೂಡಾ ಕ್ರಮಕೈಗೊಳ್ಳುವ ಅಧಿಕಾರಿ ಲೋಕಾಯುಕ್ತಕ್ಕಿದೆ ಎಂದು ತಿಳಿಸಿದರು.ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ಸಾರ್ವಜನಿಕರು ಆಗಮಿಸಿ ತಮ್ಮ ಅಹವಾಲು ಸಲ್ಲಿಸಿದರು. 90ಕ್ಕೂ ಅಧಿಕ ಅರ್ಜಿಗಳು ಸ್ವೀಕಾರವಾಗಿದ್ದು, 60 ಅರ್ಜಿ ವಿಲೇವಾರಿ ಮಾಡಲಾಗಿದೆ. ಉಳಿದ ಅರ್ಜಿಯನ್ನು ಸೋಮವಾರ ವಿಲೇವಾರಿ ಮಾಡಲಾಗುತ್ತದೆ.ಲೋಕಾಯುಕ್ತ ಉಪ ನಿಬಂಧಕ ನ್ಯಾ. ರಾಜಶೇಖರ್, ನ್ಯಾ. ಚನ್ನಕೇಶವ ರೆಡ್ಡಿ, ಹಿರಿಯ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ ಇದ್ದರು.ಸಂವಿಧಾನ ಎಲ್ಲರಿಗೂ ಸಮಬಾಳು ಸಮಪಾಲು ತತ್ವದಂತೆ ಸಾರ್ವಜನಿಕ ಸೇವೆ ಎಲ್ಲರಿಗೂ ತಲುಪಿಸುವ ಮಹತ್ವದ ಜವಾಬ್ದಾರಿ ಹೊಂದಿರುವ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಕೆ.ಎನ್. ಫಣೀಂದ್ರ ಹೇಳಿದರು.
ಲೋಕಾ ವ್ಯಾಪ್ತಿಯ ಅರಿವುತಾವು ಉಪ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದು, ಲೋಕಾಯುಕ್ತ ಸಂಸ್ಥೆಯ ಕಾರ್ಯವ್ಯಾಪ್ತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯು 13ನೇ ಜಿಲ್ಲಾ ಭೇಟಿಯಾಗಿದ್ದು, ಈ ವರೆಗೆ ಭೇಟಿ ನೀಡಿರುವ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಭೇಟಿಯ ನಂತರ ನೌಕರರ ಕಾರ್ಯ ವಿಧಾನಗಳಲ್ಲಿ ಹಲವು ಸುಧಾರಣಾ ಕ್ರಮಗಳು ಆಗಿವೆ. ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದರು.