ಕುಷ್ಟಗಿ: 12 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಶೂನ್ಯ ಕೊಡುಗೆ ನೀಡಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಬಿಜೆಪಿಯವರು ಪಕ್ಷ ಕಟ್ಟುವಲ್ಲಿ ಮಾತ್ರ ನಿಸ್ಸಿಮರು, ಆದರೆ ನಮ್ಮ ಕಾಂಗ್ರೆಸ್‌ನವರು ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಜನಪರ ಯೋಜನೆ ಜಾರಿಗೆ ತಂದಿದ್ದಾರೆ ಎಂದ ಅವರು, ಬಿಜೆಪಿಯವರ ಯೋಜನೆಗಳು ಕೇವಲ ಪ್ರಚಾರಕ್ಕೆ ಸೀಮಿತವಾಗಿವೆ ಆದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ರಾಜ್ಯದಲ್ಲಿ ಶೇ. 90ರಷ್ಟಿದ್ದಾರೆ. ಅವರ ಕುಟುಂಬವೂ ಆರ್ಥಿಕವಾಗಿ ಸಬಲಿಕರಣಗೊಳ್ಳಲು ನಮ್ಮ ಯೋಜನೆ ಸಹಕಾರಿಯಾಗಿವೆ ಎಂದರು.ಕೇಂದ್ರ ಬಿಜೆಪಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಕೆಲಸ ಮಾಡಬೇಕಿದೆ, ಉನ್ನತ ವ್ಯಾಸಂಗ ಮಾಡಿದವರು ಕಡಿಮೆ ಸಂಬಳಕ್ಕೆ ದುಡಿಯುತ್ತಿರುವದನ್ನು ಕಾಣುತ್ತಿದ್ದೇವೆ. ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆಯದಿರುವದು ಗಮನಕ್ಕೆ ಇದೆ. ಈ ಯೋಜನೆ ಅನುಷ್ಟಾನ ಸಲುವಾಗಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ₹6 ಸಾವಿರ ಕೋಟಿ ಹಣ ಬಿಡುಗಡೆಯಾಗಬೇಕಿದೆ. ಇನ್ನೂ ಆಗುತ್ತಿಲ್ಲ ಹಣ ಬಿಡುಗಡೆಯಾದರೆ ಜೆಜೆಎಂ ಕಾಮಗಾರಿ ಮುಗಿಯಲಿದೆ ಎಂದರು.
ಕಾಂಗ್ರೆಸ್ ಯುವಮುಖಂಡ ದಿಶಾ ಸಮಿತಿಯ ಸದಸ್ಯ ದೊಡ್ಡಬಸವನಗೌಡ ಬಯ್ಯಾಪುರ ಮಾತನಾಡಿ, ಕಾಂಗ್ರೆಸ್ ಸರ್ಕಾರವೂ ದೇಶದಲ್ಲಿ ನರೇಗಾ ಯೋಜನೆ, 371ಜೆ ಕಲಂ ಸೇರಿದಂತೆ ಅನೇಕ ಜನೋಪಯೋಗಿ ಕಾರ್ಯ ಕೈಗೆತ್ತಿಕೊಂಡಿದ್ದರು. ಆದರೆ ಈಗ ಬಿಜೆಪಿಯವರು ನರೇಗಾ ಯೋಜನೆಯ ಬದಲಾವಣೆ ಮಾಡುತ್ತಿದ್ದಾರೆ.ಅನುದಾನ ಕೊಡುವಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಕೇವಲ ಉಳ್ಳವರ ಪರವಾಗಿ ಆಡಳಿತ ಮಾಡುತ್ತಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಕಾಂಗ್ರೆಸ್ ಯುವಮುಖಂಡ ಲಾಡ್ಲೆಮಷಾಕ ದೋಟಿಹಾಳ ಮಾತನಾಡಿ, ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಇಚ್ಚಾಶಕ್ತಿ ಇಲ್ಲ, ಕೇವಲ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾತ್ರ ಗಮನ ಕೊಡುತ್ತಾರೆ, ಇಂತಹ ವಿಷಯಗಳ ಕಡೆ ಗಮನ ಕೊಡುವದನ್ನು ಬಿಟ್ಟು ಅಭಿವೃದ್ದಿ ಪಥದತ್ತ ವಿಚಾರ ಮಾಡಬೇಕು. ಮುಂದಿನ ದಿನಗಳಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇಂದಿನಿಂದಲೇ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.
ಮಾಜಿ ಜಿಪಂ ಅಧ್ಯಕ್ಷೆ ಮಾಲತಿ ನಾಯಕ, ಉಮೇಶ ಮಂಗಳೂರು ಸೇರಿದಂತೆ ಅನೇಕರು ಮಾತನಾಡಿದರು.