ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಶಿಲ್ಪ ಭವನ ಮುಂಭಾಗದಲ್ಲಿ ಧರಣಿ ಕುಳಿತಿದ್ದ ಕಾರ್ಯಕರ್ತರು ಹನ್ನೆರಡು ಗಂಟೆ ಸುಮಾರಿಗೆ ಒನಕೆ ಓಬವ್ವ ವೃತ್ತಕ್ಕೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸನಿಹದಲ್ಲೇ ಇದ್ದ ಕಾಂಗ್ರೆಸ್ ಕಚೇರಿಗೆ ನುಗ್ಗಲು ಮಂದಾದರು. ಬಿಜೆಪಿ ಕಾರ್ಯಕರ್ತರಿಗೆ ಪ್ರತಿರೋಧ ಒಡ್ಡಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದರು. ಆದರೆ ಸಂಘರ್ಷದ ಸುಳಿವು ಅರಿತ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಸಾಗಹಾಕಿದರು.
ತರುವಾಯ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನುಗ್ಗಲು ಯತ್ನಿಸಿದರು. ಪ್ರಮುಖ ದ್ವಾರದಲ್ಲಿಯೇ ಪೊಲೀಸರು ತಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವ ಮಾತಿನ ಚಕಮಕಿ ನಡೆಯಿತು. ಒಂದು ದ್ವಾರದಲ್ಲಿ ತಳ್ಳಾಟ, ನೂಕಾಟ ನಡೆದರೆ ಮತ್ತೊಂದು ದ್ವಾವರನ್ನು ಪೊಲೀಸರು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಮಾಡಿದರು. ಸುಮಾರು ಅರ್ಧ ತಾಸು ಯಾರೂ ಡಿಸಿ ಕಚೇರಿಗೆ ಪ್ರವೇಶಿಸಲಿಲ್ಲ, ಅಷ್ಟೇ ಏಕೆ ಡಿಸಿ ಕಚೇರಿಯಿಂದ ಹೊರ ಹೋಗಲಿಲ್ಲ.ಈ ವೇಳೆ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ. ಮಂಜುನಾಥ್,ಮಹರ್ಷಿ ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ನಾಗೇಂದ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅದರಡಿ ಹಗರಣದ ಆರೋಪ ಹೊತ್ತಿರುವ ನಾಗೇಂದ್ರರು ಇದೀಗ ಸಚಿವರಾಗಿದ್ದು ತಕ್ಷಣವೇ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ನಾಗೇಂದ್ರ ಅವರು ಸಂವಿಧಾನದ ಮೌಲ್ಯಗಳಿಗೆ ಅಪಚಾರ ಎಸಗಿದ್ದಾರೆ. ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿದೆ. ಸಚಿವರಾಗಿ ನಾಗೇಂದ್ರ ಮೌಖಿಕವಾಗಿ ಸೂಚಿಸಿರುವ ಹಿನ್ನೆಲೆಯಲ್ಲೇ ನಿಗಮದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಡೀ ಭ್ರಷ್ಟಾಚಾರದಲ್ಲಿ ಸಚಿವರ ಸೂಚನೆ ಮಹತ್ವದ ಪಾತ್ರವಿದೆ ಎಂಬ ಅಂಶಗಳನ್ನು ತನಿಖಾ ಸಂಸ್ಥೆಗಳು ತಿಳಿಸಿದೆ. ಹಗರಣದ ವಿಷಯದಲ್ಲಿ ಆಧಾರ ಇದ್ದಾಗಲೂ ಮತ್ತೆ ಸಚಿವರಾಗುವುದು ಪ್ರಜಾಪ್ರಭುತ್ವ ಹಾಗೂ ಎಸ್‍ಟಿ ಸಮುದಾಯಕ್ಕೆ ಕಳಂಕ. ನಾಗೇಂದ್ರ ಅವರಿಗೆ ಜಾಮೀನು ಸಿಕ್ಕಿದೆ ಅಷ್ಟೇ. ನ್ಯಾಯಾಲಯ ಆರೋಪ ಮುಕ್ತ ಮಾಡಿಲ್ಲ. ಆದ್ದರಿಂದ ಸಚಿವರಾಗಿ ಇರುವುದು ಸರಿಯಲ್ಲ ಎಂಬ ನಿಲವು ಬಿಜೆಪಿಯದು. ಪಕ್ಷದ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂಬ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ನಾಗೇಂದ್ರರ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಸೂಚಿಸಬೇಕೆಂದು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.