ವಿಶ್ವನಾಥ ಮಲೇಬೆನ್ನೂರು
ಕಳೆದ ಐದು ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಕೊಂಡ ಚಿಕ್ಕಮಗಳೂರು ಜಿಲ್ಲೆಯ 5 ಲಕ್ಷ ಬಿಪಿಎಲ್ ಪಡಿತರ ಗ್ರಾಹಕರು ಸೆ.30 ರೊಳಗೆ ಮತ್ತೊಂದು ಬಾರಿ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮೂರು ವರ್ಷ ತುಂಬುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅರ್ಹತೆ ಪರಿಶೀಲನೆ ನಡೆಸುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಬಳಿಕ, ಗೃಹಜ್ಯೋತಿ ಫಲಾನುಭವಿಗಳ ಅರ್ಹತೆ ಪರಿಶೀಲನೆ ನಡೆಸುತ್ತಿದೆ. ಈ ನಡುವೆ ಕಳೆದ ಜುಲೈ 15 ರಿಂದ ರಾಜ್ಯಾದ್ಯಂತ ಕಳೆದ ಐದು ವರ್ಷದ ಹಿಂದೆ ಇ-ಕೆವೈಸಿ ಮಾಡಿಕೊಂಡ ಬಿಪಿಎಲ್ ಪಡಿತರದಾರರು ಇದೀಗ ಮತ್ತೊಂದು ಬಾರಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕೆಂದು ನಿರ್ದೇಶನದೊಂದಿಗೆ ಪಡಿತರದಾರರನ್ನು ಪರಿಷ್ಕರಣೆಗೆ ಒಳಪಡಿಸಲಾಗುತ್ತಿದೆ. ಈ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರೋಬ್ಬರಿ 5,06,101 ಮಂದಿ ಇ-ಕೆವೈಸಿಗೆ ಒಳಗಾಗಬೇಕಾಗಿದೆ. ಇ-ಕೆವೈಸಿ ಮಾಡಿಸಿಕೊಳ್ಳುವುದಕ್ಕೆ ಸೆ.30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಆ ಬಳಿಕ ಬಹುತೇಕ ಇ-ಕೆವೈಸಿ ಆಗದಿರುವ ಗ್ರಾಹಕರ ಪಡಿತರ ಕಡಿತಗೊಳಿಸಿ ಇನ್ನುಳಿದ ಗ್ರಾಹಕರಿಗೆ ಮಾತ್ರ ಪಡಿತರ ನೀಡುವ ಸಾಧ್ಯತೆ ಇದೆ.ಈವರೆಗೆ 4,400 ಮಾತ್ರ ಪ್ರಗತಿ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 5 ಲಕ್ಷ ಮಂದಿ ಕಳೆದ ಐದು ವರ್ಷದ ಹಿಂದೆ (2018-19) ಬಿಪಿಎಲ್ ಕಾರ್ಡ್‌ಗೆ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಆ ಎಲ್ಲರೂ ಸಹ ಇದೀಗ ಮತ್ತೊಂದು ಬಾರಿ ಇ ಕೆ.ವೈಸಿ ಮಾಡಿಕೊಳ್ಳಬೇಕು. ಜುಲೈ 15ರಿಂದ ಎಲ್ಲ ನ್ಯಾಯ ಬೆಲೆ ಅಂಗಡಿಗಳನ್ನು ಇ-ಕೆವೈಸಿ ಮಾಡಲಾಗುತ್ತಿದೆ. ಈವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 4,400 ಮಂದಿ ಮಾತ್ರ ಇ-ಕೆವೈಸಿ ಮಾಡಿಕೊಂಡಿದ್ದಾರೆ. ಉಳಿದವರು ಸೆ.30ರ ಒಳಗೆ ಮಾಡಿಕೊಳ್ಳಬೇಕಿದೆ.
ನ್ಯಾಯ ಬೆಲೆ ಅಂಗಡಿಯಲ್ಲಿ ಉಚಿತ: ಇ-ಕೆವೈಸಿ ಉಚಿತವಾಗಿ ನ್ಯಾಯ ಬೆಲೆ ಅಂಗಡಿಯಲ್ಲಿ ಮಾಡಲಾಗುವುದು. ಬಿಪಿಎಲ್ ಕಾರ್ಡ್‌ನಲ್ಲಿ ಹೆಸರು ಇರುವ ಎಲ್ಲರೂ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಜತೆಗೆ, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ನಲ್ಲಿಯೂ ಇ-ಕೆವೈಸಿ ಮಾಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಅಲ್ಲಿ ಸೇವಾ ಶುಲ್ಕ ಪಾವತಿಸಬೇಕಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- - -
ತಾಲೂಕುಇ-ಕೆವೈಸಿ ಸಂಖ್ಯೆ
ಚಿಕ್ಕಮಗಳೂರು1,31,064
ಕಳಸ10,850
ಮೂಡಿಗೆರೆ42,586
ಎನ್.ಆರ್.ಪುರ26,108ಶೃಂಗೇರಿ11,920
ತರೀಕೆರೆ68,221ಒಟ್ಟು5,06,101
- - -ಇ-ಕೆವೈಸಿ ಆಗಬೇಕಾಗಿರುವ ಪಡಿತರ ಚೀಟಿಯ ಕಾರ್ಡ್ ಸಂಖ್ಯೆಯೊಂದಿಗೆ ಹೆಸರುಗಳನ್ನು ಆಯಾ ನ್ಯಾಯಬೆಲೆ ಅಂಗಡಿಗೆ ನೀಡಲಾಗಿದೆ. ಒಂದು ಪ್ರತಿಯನ್ನು ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಅಂಟಿಸುವುದಕ್ಕೆ ಸೂಚಿಸಲಾಗಿದೆ. ಈಗಾಗಲೇ ಇ-ಕೆವೈಸಿ ಮಾಡಿಕೊಂಡಿದ್ದರೂ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಮತ್ತೊಂದು ಬಾರಿ ಇ-ಕೆವೈಸಿ ಮಾಡಿಕೊಳ್ಳಬೇಕಿದೆ.
- ಯೋಗಾನಂದ್, ಉಪನಿರ್ದೇಶಕ, ಜಿಲ್ಲಾ ಆಹಾರ ಇಲಾಖೆ.