ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಳೆದ ಸೋಮವಾರದಿಂದ ಧರಣಿಯಲ್ಲಿ ನಿರತರಾಗಿರುವ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಇದ್ದಕ್ಕಿದ್ದಂತೆ ತಮ್ಮ ನಿಲವು ಬದಲಾಯಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಹಾಗೂ ಜಿಲ್ಲಾದಿಕಾರಿ ಕಚೇರಿಗೆ ನುಗ್ಗುವ ವಿಫಲ ಯತ್ನ ನಡೆಸಿದರು. ಬಿಜೆಪಿ ಕಾರ್ಯಕರ್ತರ ಮನದಿಚ್ಚೆಗೆ ಪೊಲೀಸರು ತಣ್ಣೀರೆರಚಿದರು.
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಕಳೆದ ಸೋಮವಾರದಿಂದ ಧರಣಿಯಲ್ಲಿ ನಿರತರಾಗಿರುವ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಇದ್ದಕ್ಕಿದ್ದಂತೆ ತಮ್ಮ ನಿಲವು ಬದಲಾಯಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಹಾಗೂ ಜಿಲ್ಲಾದಿಕಾರಿ ಕಚೇರಿಗೆ ನುಗ್ಗುವ ವಿಫಲ ಯತ್ನ ನಡೆಸಿದರು. ಬಿಜೆಪಿ ಕಾರ್ಯಕರ್ತರ ಮನದಿಚ್ಚೆಗೆ ಪೊಲೀಸರು ತಣ್ಣೀರೆರಚಿದರು. ಕಚೇರಿಗಳಿಗೆ ನುಗ್ಗಲು ಅವಕಾಶ ಮಾಡಿಕೊಡಲಿಲ್ಲ.ಶಿಲ್ಪ ಭವನ ಮುಂಭಾಗದಲ್ಲಿ ಧರಣಿ ಕುಳಿತಿದ್ದ ಕಾರ್ಯಕರ್ತರು ಹನ್ನೆರಡು ಗಂಟೆ ಸುಮಾರಿಗೆ ಒನಕೆ ಓಬವ್ವ ವೃತ್ತಕ್ಕೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸನಿಹದಲ್ಲೇ ಇದ್ದ ಕಾಂಗ್ರೆಸ್ ಕಚೇರಿಗೆ ನುಗ್ಗಲು ಮಂದಾದರು. ಬಿಜೆಪಿ ಕಾರ್ಯಕರ್ತರಿಗೆ ಪ್ರತಿರೋಧ ಒಡ್ಡಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದರು. ಆದರೆ ಸಂಘರ್ಷದ ಸುಳಿವು ಅರಿತ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಸಾಗಹಾಕಿದರು.
ತರುವಾಯ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನುಗ್ಗಲು ಯತ್ನಿಸಿದರು. ಪ್ರಮುಖ ದ್ವಾರದಲ್ಲಿಯೇ ಪೊಲೀಸರು ತಡೆದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವ ಮಾತಿನ ಚಕಮಕಿ ನಡೆಯಿತು. ಒಂದು ದ್ವಾರದಲ್ಲಿ ತಳ್ಳಾಟ, ನೂಕಾಟ ನಡೆದರೆ ಮತ್ತೊಂದು ದ್ವಾವರನ್ನು ಪೊಲೀಸರು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಮಾಡಿದರು. ಸುಮಾರು ಅರ್ಧ ತಾಸು ಯಾರೂ ಡಿಸಿ ಕಚೇರಿಗೆ ಪ್ರವೇಶಿಸಲಿಲ್ಲ, ಅಷ್ಟೇ ಏಕೆ ಡಿಸಿ ಕಚೇರಿಯಿಂದ ಹೊರ ಹೋಗಲಿಲ್ಲ.ಈ ವೇಳೆ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ. ಮಂಜುನಾಥ್,ಮಹರ್ಷಿ ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ನಾಗೇಂದ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅದರಡಿ ಹಗರಣದ ಆರೋಪ ಹೊತ್ತಿರುವ ನಾಗೇಂದ್ರರು ಇದೀಗ ಸಚಿವರಾಗಿದ್ದು ತಕ್ಷಣವೇ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣ ಇದಾಗಿದೆ. ರಾಜ್ಯದ ಖಜಾನೆ ಹಣವನ್ನು ದೇಶದ ವಿವಿಧ ಬ್ಯಾಂಕ್‍ಗಳ ಖಾತೆಗೆ ವರ್ಗಾವಣೆ ಮಾಡಿ ಲೂಟಿ ಮಾಡಲಾಗಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಷರತ್ತಿನ ಮೇಲೆ ಜಾಮೀನು ಪಡೆದು ಸಚಿವ ನಾಗೇಂದ್ರ ಅವರು ಹೊರಗೆ ಇದ್ದಾರೆ.ನಾಗೇಂದ್ರ ಅವರು ಸಂವಿಧಾನದ ಮೌಲ್ಯಗಳಿಗೆ ಅಪಚಾರ ಎಸಗಿದ್ದಾರೆ. ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿದೆ. ಸಚಿವರಾಗಿ ನಾಗೇಂದ್ರ ಮೌಖಿಕವಾಗಿ ಸೂಚಿಸಿರುವ ಹಿನ್ನೆಲೆಯಲ್ಲೇ ನಿಗಮದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಡೀ ಭ್ರಷ್ಟಾಚಾರದಲ್ಲಿ ಸಚಿವರ ಸೂಚನೆ ಮಹತ್ವದ ಪಾತ್ರವಿದೆ ಎಂಬ ಅಂಶಗಳನ್ನು ತನಿಖಾ ಸಂಸ್ಥೆಗಳು ತಿಳಿಸಿದೆ. ಹಗರಣದ ವಿಷಯದಲ್ಲಿ ಆಧಾರ ಇದ್ದಾಗಲೂ ಮತ್ತೆ ಸಚಿವರಾಗುವುದು ಪ್ರಜಾಪ್ರಭುತ್ವ ಹಾಗೂ ಎಸ್‍ಟಿ ಸಮುದಾಯಕ್ಕೆ ಕಳಂಕ. ನಾಗೇಂದ್ರ ಅವರಿಗೆ ಜಾಮೀನು ಸಿಕ್ಕಿದೆ ಅಷ್ಟೇ. ನ್ಯಾಯಾಲಯ ಆರೋಪ ಮುಕ್ತ ಮಾಡಿಲ್ಲ. ಆದ್ದರಿಂದ ಸಚಿವರಾಗಿ ಇರುವುದು ಸರಿಯಲ್ಲ ಎಂಬ ನಿಲವು ಬಿಜೆಪಿಯದು. ಪಕ್ಷದ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂಬ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ನಾಗೇಂದ್ರರ ರಾಜೀನಾಮೆ ಪಡೆಯುವಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಸೂಚಿಸಬೇಕೆಂದು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾ ಮಾಜಿ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಬಿಜೆಪಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷ ರಾಮರೆಡ್ಡಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೂರ್ತಿ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಹನುಮಂತಪ್ಪ ಉಪ್ಪಾರ್, ಜಿಲ್ಲಾ ಕಾರ್ಯದರ್ಶಿ ರೇಖಾ, ಉಪಾಧ್ಯಕ್ಷ ಲಿಂಗರಾಜು, ಜಿಲ್ಲಾ ಓಬಿಸಿ ಮೋರ್ಚಾದ ಅಧ್ಯಕ್ಷ ಬಾಲರಾಜ್, ನಾಯಕನಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿ ಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ, ಜಿಲ್ಲಾ ಎಸ್ಸಿ ಮೋರ್ಚಾದ ಉಪಾಧ್ಯಕ್ಷ ಚಂದ್ರಣ್ಣ, ಮುಖಂಡರಾದ ಚಿರಳ್ಳಿ ತಿಪ್ಪೇಸ್ವಾಮಿ, ಸೋಮು, ಸಿದ್ದಾರ್ಥ, ಬಲರಾಮ್ ಲಿಂಗಣ್ಣ, ಸಣ್ಣ ರಂಗಪ್ಪ, ಕುಮಾರಸ್ವಾಮಿ, ಮರಿಸ್ವಾಮಿ, ಅಜ್ಜಲ್ ಆಹ್ಮದ್, ತಿಪ್ಪೇಸ್ವಾಮಿ, ಹೊನ್ನೂರಸ್ವಾಮಿ, ಕುಮಾರಸ್ವಾಮಿ, ರೂಪ, ರಾಧಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.