ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಕುರಿತು ನಗರಸಭೆ ಅಧಿಕಾರಗಳೊಡನೆ ಪರಿಶೀಲನೆ ನಡೆಸಿದ ಅವರು, ಯಾದಗಿರಿ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸುವ ಉದ್ದೇಶದಿಂದ ನಗರಕ್ಕೆ ಸಮಗ್ರ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ₹1287.70 ಕೋಟಿ ಮೊತ್ತದ ಯೋಜನೆಯನ್ನು ಪ್ರಸ್ತಾಪಿಸ ಲಾಗಿದೆ. ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ತಾಂತ್ರಿಕ ಅನುಮೋದನೆ ಪಡೆಯಲಾಗಿದ್ದು, ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿ ರಾಹುಲ್ ತಿಳಿಸಿದ್ದಾರೆ.ಈ ಯೋಜನೆಯಡಿ 9 ಎಂಎಲ್‌ಡಿ ಸಾಮರ್ಥ್ಯದ ಮಲಿನ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ವ್ಯವಸ್ಥೆ ಜಾರಿಯಾದಲ್ಲಿ ಪ್ರಸ್ತುತ ತೆರೆದ ಚರಂಡಿ ಮತ್ತು ವಿವಿಧ ಮೂಲಗಳಿಂದ ನೇರವಾಗಿ ಭೀಮಾ ನದಿಗೆ ಸೇರುವ ಕೊಳಚೆ ನೀರನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಮಲಿನ ನೀರನ್ನು STPಯಲ್ಲಿ ಸಂಸ್ಕರಿಸಿದ ನಂತರವೇ ನಿಯಮಾನುಸಾರ ವಿಲೇವಾರಿ ಮಾಡುವ ಮೂಲಕ ಭೀಮಾ ನದಿಯ ಜಲಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಸಮಗ್ರ ಒಳಚರಂಡಿ ವ್ಯವಸ್ಥೆಯ ಅನುಷ್ಠಾನದಿಂದ ಯಾದಗಿರಿ ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಕಂಡುಬರುವುದರ ಜೊತೆಗೆ, ಸಾರ್ವಜನಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಉಂಟಾ ಗಲಿದೆ. ನಗರದಲ್ಲಿ ಮಲಿನ ನೀರಿನ ವೈಜ್ಞಾನಿಕ ನಿರ್ವಹಣೆ ಸಾಧ್ಯವಾಗುವುದರಿಂದ ಪರಿಸರ ಸಂರಕ್ಷಣೆಗೆ ಸಹ ಹೆಚ್ಚಿನ ಆದ್ಯತೆ ದೊರೆಯಲಿದೆ ಎಂದರು.
ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತ ನಂತರ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾದಗಿರಿ ನಗರವನ್ನು ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿನಗರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಯೋಜನೆಯು ಮಹತ್ವದ ಹೆಜ್ಜೆಯಾಗಲಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ತಿಳಿಸಿದ್ದಾರೆ.