ಬಿಜೆಪಿ ಜನಾಕ್ರೋಶ ಯಾತ್ರೆ ಹಾಸ್ಯಾಸ್ಪದ: ಕೆ.ಎನ್‌.ದೀಪಕ್‌

KannadaprabhaNewsNetwork | Published : Apr 12, 2025 12:45 AM

ಸಾರಾಂಶ

ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜನಕ್ರೋಶ ಯಾತ್ರೆ ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಈ ಯಾತ್ರೆಯ ಹಿಂದಿಲ್ಲ. ವಿಜಯೇಂದ್ರ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾತ್ರವಲ್ಲ. ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ವಿರುದ್ಧ ಧನಿ ಎತ್ತಲಾಗದ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಕೆ.ಎನ್‌.ದೀಪಕ್‌ ಟೀಕಿಸಿದ್ದಾರೆ.

ಇಷ್ಟೊಂದು ಅಸಮರ್ಥ, ನಿರ್ಲಜ್ಜ ಮತ್ತು ಜನ ವಿರೋಧಿ ವಿರೋಧಿ ಪಕ್ಷವನ್ನು ರಾಜ್ಯ ಎಂದೂ ಕಂಡಿರಲಿಲ್ಲ. ಸ್ವಪಕ್ಷೀಯರೇ ಆರೋಪಿಸುವಂತೆ ಪೇಮೆಂಟ್ ಸೀಟ್‌ನಲ್ಲಿ ಕುಳಿತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜನಕ್ರೋಶ ಯಾತ್ರೆ ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಈ ಯಾತ್ರೆಯ ಹಿಂದಿಲ್ಲ. ವಿಜಯೇಂದ್ರ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾತ್ರವಲ್ಲ. ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಜೆಟ್‌ನ 51 ಸಾವಿರ ಕೋಟಿ ರು. ಹಣ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಅವರೆಲ್ಲರೂ ಸಂತೃಪ್ಟರಾಗಿದ್ದಾರೆ. ರಾಜ್ಯದ ಎಲ್ಲಾ ಮತದಾರರ ಆರ್ಶೀವಾದ ನಮ್ಮ ಕಾಂಗ್ರೆಸ್ ಸರ್ಕಾರದ ಪರವಾಗಿದ್ದಾರೆ ಎಂದಿದ್ದಾರೆ.

ಗ್ಯಾರಂಟಿ ಯೋಜನೆಗಳ ಯಶಸ್ಸುನ್ನು ವಿಫಲಗೊಳಿಸುವ ಏಕೈಕ ಉದ್ದೇಶದಿಂದ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಸರ್ಕಾರದ ಜೊತೆ ಶಾಮೀಲಾಗಿ ರಾಜ್ಯಕ್ಕೆ ನ್ಯಾಯ ಬದ್ಧವಾಗಿ ಸಿಗಬೇಕಾದ ತೆರಿಗೆ ಪಾಲು ಮತ್ತು ಅನುದಾನಕ್ಕೆ ಕತ್ತರಿ ಹಾಕಿಸಿದ್ದಾರೆ.

ರಾಜ್ಯದ ಜನ ತಮ್ಮ ಬೆವರಿನ ಗಳಿಕೆಯಿಂದ ನೀಡುತ್ತಿರುವ ಐದು ಲಕ್ಷ ಕೋಟಿ ರು. ತೆರಿಗೆ ಹಣದಲ್ಲಿ ಕೇವಲ 6 ಸಾವಿರ ಕೋಟಿ ರು. ಮಾತ್ರ ವಾಪಸ್ ನೀಡುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಬಿಜೆಪಿ ಪಕ್ಷದ ಯಾತ್ರೆಯ ಸಮಯದಲ್ಲಿ ಈ ಆಕ್ರೋಶದ ಬಿಸಿ ಕೂಡ ಬಿಜೆಪಿ ನಾಯಕರಿಗೆ ತಟ್ಟಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article