ಕಾಂಗ್ರೆಸ್ ಅಭ್ಯರ್ಥಿ ಪರ ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರಚಾರದಲ್ಲಿ ರಾಜೇಗೌಡಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕೇಂದ್ರದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಬಹಳ ಭರವಸೆಗಳನ್ನು ನೀಡಿದ್ದು, ಅವುಗಳು ಜನರಿಗೆ ನಿಲುಕದ ಕನಸಾಗಿ ಉಳಿದಿವೆ ಎಂದು ಶಾಸಕ, ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.ಬಾಳೆಹೊನ್ನೂರು ಪಟ್ಟಣದಲ್ಲಿ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪರ ಪ್ರಚಾರ ನಡೆಸಿ ಮಾತನಾಡಿದರು. ಕೇಂದ್ರದಲ್ಲಿ ಆಡಳಿತ ನಡೆಸುವ ಮುನ್ನ ಬಿಜೆಪಿ ಕುರಿತು ಜನ ರಿಂದಲೂ ಬಹಳಷ್ಟು ನಿರೀಕ್ಷೆಗಳಿತ್ತು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರೆ. 2 ಕೋಟಿ ಜನರಿಗೆ ಉದ್ಯೋಗ, ಬೆಲೆ ಇಳಿಕೆ ಮಾಡುತ್ತಾರೆ ಎಂಬ ಕನಸು ಕಟ್ಟಿಕೊಂಡಿದ್ದರು. ಆದರೆ ಈಗ ಭರವಸೆಗಳು ಕೇವಲ ಕನಸಾಗಿಯೇ ಉಳಿದಿದೆ. ಒಂದನ್ನೂಈ ಬಾರಿಯ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಪಕ್ಷದ ಪರ ಜನ ಒಲವು ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಜನಪರ, ಕೂಲಿ ಕಾರ್ಮಿಕರು, ಬಡವರು, ರೈತರು, ಮದ್ಯಮ ವರ್ಗದ ಜನರು, ಸಣ್ಣ ಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳಿಗೆ ಸಮಾನ ನ್ಯಾಯವನ್ನು ಕಾಂಗ್ರೆಸ್ ನೀಡಿದೆ. ಅಭಿವೃದ್ಧಿ ಪರ ಕಾರ್ಯಕ್ರಮ ನೀಡಿ, ಸಂಕಷ್ಟದಲ್ಲಿ ಸ್ಪಂದಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮೃದ್ಧವಾಗಿ ಮಳೆಯಾಗಿತ್ತು. ಆದರೂ ಸಹ ಬಿಜೆಪಿ ರೈತರಿಗೆ ವಿದ್ಯುತ್ ನೀಡಲು ವಿಫಲವಾಗಿತ್ತು. ಇಂದು ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿಯಿದ್ದರೂ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡ ಲಾಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಮುಖ್ಯಮಂತ್ರಿ ಅಧಿಕಾರಿಗಳ ಸಭೆ ಕರೆದು ಬೇಸಿಗೆಯಲ್ಲಿ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಸೂಚಿಸಿದ್ದರು. ತೀವ್ರ ನೀರಿನ ಸಮಸ್ಯೆ ಇರುವ ಕಡೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ತಿಳಿಸಿದ್ದರು. ಪ್ರತೀ ತಾಲೂಕಿಗೂ ರು. 85 ಲಕ್ಷ ಹಣ ಕುಡಿಯುವ ನೀರಿಗೆ ಟಾಸ್ಕ್ ಪೋರ್ಸ್ ಮೂಲಕ ಮುಖ್ಯಮಂತ್ರಿಗಳು ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಜನ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂಬ ಮನಃಸ್ಥಿತಿ ಹೊಂದಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ಭರವಸೆಯಿದೆ. ಬಿಜೆಪಿ ಸುಳ್ಳು ಭರವಸೆ, ಜಾತಿ ಧರ್ಮ ಒಡೆದಾಳುವ, ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಲಿದ್ದಾರೆ. ಈ ಚುನಾವಣೆಯಲ್ಲಿ ಕೇಂದ್ರದ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಪಂಚ ಭರವಸೆಗಳಂತೆ ಜನರಿಗೆ ನ್ಯಾಯ ನೀಡಲಾಗುವುದು. ಸರ್ಕಾರಕ್ಕೆ ಬರುವ ಹಣ ಎಲ್ಲೂ ಕೂಡ ನಿಂತ ನೀರಾಗಬಾರದು. ಹಣದ ಚಲಾವಣೆ ಆಗಬೇಕು. ಆಗ ಮಾತ್ರ ಆರ್ಥಿಕ ಭದ್ರತೆ, ಉದ್ಯೋಗ ಸೃಷ್ಟಿಯಾಗಲಿದೆ. ಎಲ್ಲರೂ ವೃತ್ತಿ ನಿರತರಾಗಿರಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ್ನು ದೇಶದಲ್ಲಿ ಜನರು ಅಧಿಕಾರಕ್ಕೆ ತರುವ ವಿಶ್ವಾಸವಿದೆ ಎಂದರು.ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಜಿಪಂ ಮಾಜಿ ಸದಸ್ಯರಾದ ಮಹಮ್ಮದ್ ಇಫ್ತೆಕಾರ್ ಆದಿಲ್, ಚಂದ್ರಮ್ಮ, ಬಗರ್‌ಹುಕುಂ ಸಮಿತಿ ಸದಸ್ಯೆ ಹೇಮಲತಾ, ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಮುಖಂಡರಾದ ಎಂ.ಎಸ್.ಅರುಣೇಶ್, ಬಿ.ಸಿ.ಸಂತೋಷ್‌ಕುಮಾರ್, ಮಹೇಶ್ ಆಚಾರ್ಯ, ಶಶಿಕಲಾ, ರಂಜಿತಾ, ಕಾರ್ತಿಕ್ ಹುಣಸೇಕೊಪ್ಪ, ಜಾನ್ ಡಿಸೋಜಾ ಮತ್ತಿತರರು ಹಾಜರಿದ್ದರು. ೧೮ಬಿಹೆಚ್‌ಆರ್ ೧: ಬಾಳೆಹೊನ್ನೂರು ಪಟ್ಟಣದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪರ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪ್ರಚಾರ ನಡೆಸಿದರು. ಮಹಮ್ಮದ್ ಹನೀಫ್, ಹೇಮಲತಾ, ಜಯಪ್ರಕಾಶ್, ಸಂತೋಷ್‌ಕುಮಾರ್ ಇದ್ದರು.