ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಗುರುವಾರ ಸಂಜೆ ವಿಜಯಪುರಕ್ಕೆ ಆಗಮಿಸಿತು. ನಗರದ ದರಬಾರ ಗ್ರೌಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಜನಾಕ್ರೋಶದ ಜ್ಯೋತಿಯನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಬಾರುಕೋಲು ತೋರಿಸುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಿದ್ದರಾಮಯ್ಯನವರೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವ ರೀತಿ ಜನಾಕ್ರೋಶ ಇದೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ ವಿಜಯಪುರಕ್ಕೆ ಬಂದು ನೋಡಿ, ಜನ ಬೀದಿಗಿಳಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡಿದೆ. ಅಹಿಂದ ಹೆಸರಲ್ಲಿ ಸಿಎಂ ಕುರ್ಚಿ ಮೇಲೆ ಕುಳಿತ ಬಳಿಕ ಹಿಂದುಳಿದ ಸಮಾಜಗಳನ್ನು ಸಂಪೂರ್ಣ ಮರೆತಿದ್ದಾರೆ. ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರಿಗೆ ಉನ್ನತ ಶಿಕ್ಷಣ ಪಡೆಯಲು ಸೌಲಭ್ಯ ನೀಡುತ್ತಾರೆ. ಸಿದ್ದರಾಮಯ್ಯನವರೇ ನೀವು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಕೇವಲ ಮುಸ್ಲಿಮರ ಮುಖ್ಯಮಂತ್ರಿಯೋ ಎಂದು ಖಾರವಾಗಿಯೇ ಪ್ರಶ್ನಿಸಿದರು.
ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ಆದರೆ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದಾಗ ರಕ್ಷಣೆ ಕೊಟ್ಟಿರಲ್ಲಾ ಸಿದ್ದರಾಮಯ್ಯನವರೇ ಇದನ್ನು ಬಿಜೆಪಿ ಸಹಿಸಲ್ಲ. ಉಗ್ರಗಾಮಿಗಳ ಸವಾಲು ಸ್ವೀಕಾರ ಮಾಡಿ ಮುರಳಿ ಮನೋಹರ ಜೋಶಿ ಅವರ ನೇತೃತ್ವದಲ್ಲಿ ಕಾಶ್ಮೀರದ ಲಾಲ್ ಚೌಕ್‌ಗೆ ಹೋದರು. ಕರ್ನಾಟಕದಿಂದ ಯಡಿಯೂರಪ್ಪನವರ ನೇತೃತ್ವದಲ್ಲಿ ಜನರು ಹೋದರು. ವ್ಯಕ್ತಿಗಿಂತ ದೇಶ ಮುಖ್ಯ ಎಂದು ಎರಡೆರಡು ಬಾರಿ ಹೇಳುವ ಮೂಲಕ ಪರೋಕ್ಷವಾಗಿ ಯತ್ನಾಳಗೆ ಟಾಂಗ್ ಕೊಟ್ಟರು.ಭಾರತದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಕೊಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಪ್ರಧಾನಿ ನರೇಂದ್ರ ಮೋದಿ ಅವರು. ಅವರ ಹನ್ನೊಂದು ವರ್ಷದ ಆಡಳಿತದಲ್ಲಿ ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯುಳ್ಳ ಪಟ್ಟಿಯಲ್ಲಿ ಬಂದಿದೆ. ಯಡಿಯೂರಪ್ಪ ಅವರ ಸರ್ಕಾರವಿದ್ದಾಗ ಮೂವತ್ತು ಸಾವಿರ ಕಟ್ಟಿದರೆ ರೈತರಿಗೆ ವಿದ್ಯುತ್ ಸಂಪರ್ಕ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಮೂರು ಲಕ್ಷ ಕಟ್ಟಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿ.ಪ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಬೆಳಗ್ಗೆ ಹಾಲು ಕುಡಿಯುವಾಗ ಆರಂಭವಾಗುವ ಆಕ್ರೋಶ ರಾತ್ರಿ ಆಲ್ಕೋಹಾಲು ಕುಡಿಯುವವರೆಗೂ ಇದೆ. ರಾಜ್ಯ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, ಜಾತಿ ಒಡೆಯುವುದನ್ನು ಮಾಡುತ್ತಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ ಅವರು ಇಲ್ಲಿಗೆ ಬಂದು ಇಲ್ಲಿ ಭೀಮ ಹೆಜ್ಜೆ ಇಟ್ಟಿದ್ದರಿಂದ ವಿಜಯಪುರ ನನಗೆ ಪುಣ್ಯಭೂಮಿಯಾಗಿದೆ ಎಂದರು.ಕಾಂಗ್ರೆಸ್‌ನ ದಲಿತ ಮುಖಂಡರಿಗೆ ಬಾಯಿಯೇ ಇಲ್ಲವಾಗಿದೆ. ಕಾಂಗ್ರೆಸ್ ಸುಡುವ ಮನೆ, ದಲಿತರಿಗೆ ಅಲ್ಲಿ ಭವಿಷ್ಯವಿಲ್ಲ ಎಂದು ಬಾಬಾಸಾಹೇಬರೇ ಹೇಳಿದ್ದರು. ನೀವು ಇನ್ನೂ ಅಲ್ಲಿ ಯಾಕೆ ಜೋತು ಬಿದ್ದಿದ್ದೀರಿ ಎಂದು ಪ್ರಶ್ನಿಸಿದರು. ದಲಿತರನ್ನು ಉದ್ಧಾರ ಮಾಡಬೇಕು ಎಂದು ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ಕೊಡುತ್ತಿದೆ. ಬನ್ನಿ ನಮ್ಮ ಜೊತೆ ಎಂದು ಕರೆ ನೀಡಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಈ ಯಾತ್ರೆಗೆ ವಿಜಯಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಾಕ್ರೋಶ ವ್ಯಕ್ತವಾಗಿದೆ. ಸಿದ್ದರಾಮಯ್ಯನವರಿಗೆ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರೇ ದೇಶದಲ್ಲೇ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ ಎಂದು ಹೇಳಿದ್ದಾರೆ. ಪೌರ ಕಾರ್ಮಿಕರನ್ನು ಕಾಯಂ ಮಾಡಲು ಮೂರರಿಂದ ಐದು ಲಕ್ಷ ಲಂಚ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ನಾನು ಪ್ರತಿಪಕ್ಷದ ನಾಯಕನಿದ್ದಾಗ ಅರ್ಕಾವತಿ ಹಗರಣ ಹೊರಹಾಕಿದ್ದೇನೆ. ಆದರೆ ಇವತ್ತೂ ಆ ವರದಿ ಹೊರಬರಲಿಲ್ಲ. ಮುಡಾ ಹಗರಣ ಇನ್ನೂ ವಿಚಾರಣೆ ನಡೆಯುತ್ತಿದೆ. ಜಾತಿಗಣತಿ ವಿಚಾರದಲ್ಲಿ ನಿಮ್ಮಲ್ಲೇ ಗೊಂದಲ ಮೂಡಿದೆ. ಅದರ ಬಗ್ಗೆ ನಿರ್ಧಾರ ಕೈಗೊಳ್ಳದೆ ಮುಂದಕ್ಕೆ ಹಾಕಿದ್ದಾರೆ. ಇದನ್ನೆಲ್ಲ ನೋಡಿದರೆ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು, ನೀವೇಲ್ಲರೂ ಪಕ್ಷ ಕಟ್ಟಿಸಿದ್ಧವಾಗಿರಿ ಎಂದು ಕರೆ ನೀಡಿದರು.ಮಾಜಿ ಡಿಸಿಎಂ ಶ್ರೀರಾಮುಲು ಮಾತನಾಡಿ, ಜನರಿಗೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರಕ್ಕೆ ಕಿವಿ ಹಾಗೂ ಬಾಯಿ ಇಲ್ಲದಂತಾಗಿದೆ. ಅದನ್ನು ಮಾತನಾಡುವಂತೆ ಮಾಡಲು ಈ ಜನಾಕ್ರೋಶ ನಡೆಸಲಾಗುತ್ತಿದೆ. ಸಿಎಂ ಸಿದ್ಧರಾಮಯ್ಯನವರು 216 ದಿನಕ್ಕೆ ಸಿಎಂ. ಅವರು ಮಾಜಿ ಸಿಎಂ ಆಗಬೇಕಿದೆ. ಇವರದ್ದು ಎರಡೂವರೆ ವರ್ಷಗಳ ಅಗ್ರಿಮೆಂಟ್ ಇದೆ. ಬಿಜೆಪಿಯವರು ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ. ಅದನ್ನು ಡಿ.ಕೆ.ಶಿವಕುನಾರ ಅವರೇ ಮಾಡುತ್ತಾರೆ. ಖರ್ಗೆ ಮಾತು ಕೇಳಿದರೆ ಇದರ ಹಿನ್ನೆಲೆಯಲ್ಲಿ ತಮ್ಮ ಮಗನನ್ನು ಸಿಎಂ ಮಾಡುವ ಲೆಕ್ಕಾಚಾರವಿದ್ದಂತಿದೆ ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮೂಲಕ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ. ಬಡವರು ಊಟಕ್ಕೂ ಪರದಾಡುವಂತೆ ಮಾಡಿದ್ದಾರೆ. ನೌಕರರಿಗೆ ಸಂಬಳ ಕೊಡಲು ಇವರ ಬಳಿ ಹಣವಿಲ್ಲ. ಗಣತಿ ಹೆಸರಿನಲ್ಲಿ ಸಮಾಜಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದೀರಿ. ಈ ಮೂಲಕ ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿದ್ದೀರಿ. ಸಿದ್ದರಾಮಣ್ಣನವರೇ ಅವ್ಯವಹಾರಗಳನ್ನು ಮಾಡಿ ರಾಜೀನಾಮೆ ಕೊಡದೆ ಕೂತಿರುವುದು ನಾಚಿಗೇಡಿನ ಕೆಲಸ. ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಪಕ್ಷ ದೊಡ್ಡದು ವಿನಹ ರಮೇಶ ಜಿಗಜಿಣಗಿ ದೊಡ್ಡವನಲ್ಲ. ಸಮೃದ್ಧವಾಗಿರುವ ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡೋಣ ಎನ್ನುವ ಮೂಲಕ ಯತ್ನಾಳ ಹಿಂದೆ ಹೋಗಬೇಡಿ ಎಂದು ಕಾರ್ಯಕರ್ತರಲ್ಲಿ ಪರೋಕ್ಷವಾಗಿ ಮನವಿ ಮಾಡಿದರು.ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ 140 ಸೀಟು ಗೆಲ್ಲುವುದು ಖಚಿತ. ಕಾರ್ಯರ್ತರು ಮನಸ್ಸು ನಾಡಿದರೆ ಜಿಪಂ, ತಾಪಂ ಚುನಾವಣೆಗಳಲ್ಲಿ ಗೆಲುವು ಸಾಧಿಸಬಹುದು. ನಾವೆಲ್ಲರೂ ಹಳ್ಳಿಹಳ್ಳಿಗೆ ತಿರುಗಾಡಿ ಪಕ್ಷ ಕಟ್ಟೋಣ ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು. ಸಂಜೆ 6ಗಂಟೆ ಸುಮಾರಿಗೆ ನಗರಕ್ಕೆ ಆಗಮಿಸಿದ ನಾಯಕರು, ಮೊದಲು ಛತ್ರಪತಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಬಳಿಕ ಯಾತ್ರೆಗೆ ಚಾಲನೆ ನೀಡಲಾಯಿತು. ಶಿವಾಜಿ ಸರ್ಕಲ್‌ನಿಂದ ದರಬಾರ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಜಗದೀಶ ಶೆಟ್ಟರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೊಳ ಸೇರಿದಂತೆ ಹಾಲಿ,ಮಾಜಿ ಶಾಸಕರು, ಕಾರ್ಯಕರ್ತರು ಭಾಗಿಯಾಗಿದ್ದರು.ಸಭೆಯಲ್ಲಿ ಶಾಸಕ ಹರೀಶ ಪುಂಜಾ, ಮಾಜಿ ಡಿಸಿಎಂ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ, ಪಿ.ಹೆಚ್.ಪೂಜಾರ, ಮಾಜಿ ಶಾಸಕ ಪಿ.ರಾಜೀವ್ ಸೇರಿದಂತೆ ಅವಳಿ ಜಿಲ್ಲೆಗಳ ಹಲವು ನಾಯಕರು, ಸಾವಿರಾರು ಕಾರ್ಯರ್ತರು ಭಾಗವಹಿಸಿದ್ದರು.
----ಕೋಟ್
ಸಿದ್ದರಾಮಯ್ಯನವರೇ ಈ ಹಿಂದೆ ನೀವು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಜಾತಿ ಒಡೆಯುವ ಕೆಲಸ ಮಾಡಲಿಲ್ಲವೇ?. ನಿಮ್ಮ ಸರ್ಕಾರ ಬಂದ ಮೇಲೆ ಲವ್ ಜಿಹಾದ್ ಕೇಸಗಳು ಹೆಚ್ಚಾಗುತ್ತಿವೆ. ಇಂತಹ ಸರ್ಕಾರ ಇರಬಾರದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಸೋತಿರಬಹುದು. ಆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಿತ್ತೊಗೆಯುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಬೊಬ್ಬೆ ಹೊಡೆದಿರಿ. ಅಧಿಕಾರಕ್ಕೆ ಬಂದರೆ ಪ್ರತಿವರ್ಷ ₹ ೫೦ ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದು ಹೇಳಿದಿರಿ, ಒಂದೇ ಒಂದು ಬಿಡಿಗಾಸು ಕೊಡಲಿಲ್ಲ.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ