ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಗ್ಗಟ್ಟಾಗಿರಬೇಕು, ಇಲ್ಲದಿದ್ದರೆ ಮೋದಿ ಅಮಿತ್ ಷಾ ಸರ್ಕಾರವನ್ನು ಉರುಳಿಸುತ್ತಾರೆ'' ಎಂದು ಹೇಳುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮ್ಯ - ಡಿಕೆಶಿ ಒಗ್ಗಟ್ಟಾಗಿಲ್ಲ ಎಂದು ಹೇಳಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ : ''ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಗ್ಗಟ್ಟಾಗಿರಬೇಕು, ಇಲ್ಲದಿದ್ದರೆ ಮೋದಿ ಅಮಿತ್ ಷಾ ಸರ್ಕಾರವನ್ನು ಉರುಳಿಸುತ್ತಾರೆ''ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮ್ಯ - ಡಿಕೆಶಿ ಒಗ್ಗಟ್ಟಾಗಿಲ್ಲ ಎಂದು ಹೇಳಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಮೋದಿ, ಅಮಿತ್ ಶಾ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಷಡ್ಯಂತ್ರ ಮಾಡಿದ್ದಾರೆ ಎಂದ ಖರ್ಗೆ ಆರೋಪಕ್ಕೆ ಕೋಟ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು. ಕೇಂದ್ರದಲ್ಲಿ ನಾವಿದ್ದರೆ ರಾಜ್ಯದ ಬಿಜೆಪಿ ಸರ್ಕಾರವನ್ನು ವಜಾ ಮಾಡುತಿದ್ದೆವು, ಬಿಜೆಪಿಯವರು ನಮ್ಮ ಸರ್ಕಾರ ವಜಾ ಮಾಡದೇ ಬಿಟ್ಟಿದ್ದಾರೆ ಎಂಬರ್ಥದಲ್ಲಿ ಖರ್ಗೆ ಹೇಳಿರಬಹುದು ಎಂದು ಕೋಟ ಲೇವಡಿ ಮಾಡಿದರು.
ಬಿಜೆಪಿ ಯಾವತ್ತೂ ಇತರ ಸರ್ಕಾರಗಳನ್ನು ಉರುಳಿಸಿಲ್ಲ, ಬಿಜೆಪಿಗೆ ಆ ಮಾನಸಿಕತೆ ಇಲ್ಲ, ಆದರೆ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವುದರಲ್ಲಿ ಎತ್ತಿದ ಕೈ, ಖರ್ಗೆ ದೊಡ್ಡವರು, ಅವರಿಗೆ ಇತಿಹಾಸ ಗೊತ್ತಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಯತ್ನಿಸಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೊರತು, ರಾಜ್ಯಪಾಲರ ಆಡಳಿತ ತಂದ ಒಂದೇ ಒಂದು ಉದಾಹರಣೆ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಇಲ್ಲ ಎಂದರು.
ಈಗ ಕಾಂಗ್ರೆಸ್ ಸ್ವಾಗತಿಸಲಿ!:
ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕದೆ ರಾಷ್ಟ್ರಪತಿಗೆ ಕಳುಹಿಸಿದದ್ದಕ್ಕೆ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಕೋಟ, ಇದು ಹೊಸತೇನಲ್ಲ. ಹಿಂದೆ ರಾಜ್ಯದಲ್ಲಿ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆ ಗೆ ಸಹಿ ಹಾಕದೇ, ರಾಷ್ಟ್ರಪತಿಗೆ ವರ್ಗಾವಣೆ ಮಾಡಿದ್ದರು, ಆಗ ಕಾಂಗ್ರೆಸ್ ನಾಯಕರು ಅದನ್ನು ಸ್ವಾಗತಿಸಿದ್ದರು. ಅಂದು ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದ ಕಾಂಗ್ರಸ್ ಇಂದು ಈ ನಡೆಯನ್ನು ಸ್ವಾಗತಿಸಬೇಕಿತ್ತು ಎಂದರು.
ವಕ್ಫ್ ಕಾಯ್ದೆಗೆ ಬೆಂಬಲಿಸಿ:
ಕೇಂದ್ರ ಸರ್ಕಾರದ ವಕ್ಫ್ ಮಸೂದೆಯ ವಿರುದ್ಧ ವಕ್ಫ್ ಮಂಡಳಿಗೆ ಕೋರ್ಟಿಗೆ ಹೋಗುವ ಅಧಿಕಾರ ಇಲ್ಲ. ಬಿಲ್ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ವಕ್ಫ್ ಮಂಡಳಿಯಲ್ಲಿ ಪಾರದರ್ಶಕತೆ ಜಾರಿಗೆ ತಂದಿದೆ. ಮತೀಯ ಮತ್ತು ಮತದ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ವಕ್ಫ್ ಕಾಯಿದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡುತ್ತಿದ್ದೇನೆ ಎಂದರು.
ಜಾತಿ ಗಣತಿ - ಸರ್ಕಾರ ತಪ್ಪಿದೆ:
ರಾಜ್ಯ ಸರ್ಕಾರದ ಜಾತಿ ಜನಗಣತಿ ವರದಿಯ ಬಗ್ಗೆ ಬಿಜೆಪಿ ಕಾದು ನೋಡುವ ತೀರ್ಮಾನ ಮಾಡಿದೆ, ಈಗಾಗಲೇ ವರದಿಯ ಅಂಗೀಕಾರ, ಸ್ವೀಕಾರ, ಪ್ರಕಟಣೆ, ಬಿಡುಗಡೆ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿದೆ. ಮುಖ್ಯಮಂತ್ರಿ ಅವರು ತನಗೆ ಬಂದಿರುವ ಗಂಡಾಂತರ ತಪ್ಪಿಸಿಕೊಳ್ಳಲು ಜನಗಣತಿಯನ್ನು ಮುನ್ನಲೆಗೆ ತಂದಿದ್ದಾರೆ ಎಂದು ಕೋಟ ಆರೋಪಿಸಿದರು.
ಈ ವರದಿ ರಚನೆಗೆ ಸಿದ್ದರಾಮಯ್ಯನವರೇ ಕಾಂತರಾಜ್ ಅವರನ್ನು ನೇಮಿಸಿದ್ದು, ಅವರೇ ಇದಕ್ಕಾಗಿ ಹಣ ಬಿಡುಗಡೆ ಮಾಡಿದ್ದು. ಈಗ ಸಂಪುಟ ಸಭೆ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡಬೇಕು. ಮತ್ತೊಂದು ಉಪಸಮಿತಿ ಮಾಡಿ ಮತ್ತಷ್ಟು ಕಾಲ ಮುಂದೂಡಬಹುದು, ನಾವಂತೂ ಹಿಂದುಳಿದ ವರ್ಗಳ ಪರವಾಗಿದ್ದೇವೆ. ನಾವು ಬಿಜೆಪಿ ಮುಖಂಡರು ಸಭೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.