ಕನ್ನಡಪ್ರಭ ವಾರ್ತೆ ಕೋಲಾರ
ರಾಷ್ಟ್ರದ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ೨೭ ವರ್ಷಗಳ ಬಳಿಕ ಬಿಜೆಪಿ ಭಾರಿ ಜಯ ಗಳಿಸಿದೆ. ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ. ಜೆ.ಪಿ.ನಡ್ಡಾ, ಅಮಿತ್ ಷಾ ಅವರ ನೇತೃತ್ವದಲ್ಲಿ ಬಹುಮತ ಪಡೆದು ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ತಿಳಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಪ್ರಥಮವಾಗಿ ದೆಹಲಿಯ ಬಿಜೆಪಿ ಪಕ್ಷದ ವಿಜಯೋತ್ಸವ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ, ಮುಖಂಡರ ಸಭೆಯಲ್ಲಿ ಮಾತನಾಡಿದರು.ಮುಂದೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ
ದೆಹಲಿ ೭೦ ಸ್ಥಾನಗಳ ಪೈಕಿ ಬಿಜೆಪಿ ಪಕ್ಷವು ಸುಮಾರು ೪೮ ಸ್ಥಾನಗಳನ್ನು ಪಡೆದಿದೆ. ಆಪ್ ಪಕ್ಷವು ೨೨ ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಬಿಜೆಪಿಯ ಬಹುದಿನದ ಕನಸು ಈಡೇರಿದಂತಾಗಿರುವುದು ದೇಶಕ್ಕೆ ಶುಭ ಸೂಚನೆಯಾಗಿದೆ. ರಾಜ್ಯದಲ್ಲಿ ಮುಂಬರಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹಿರಿಯ ಧುರೀಣರಾದ ಯಡಿಯೂರಪ್ಪಜೀ ಸೇರಿದಂತೆ ಅನೇಕ ನಾಯಕರ ನೇತೃತ್ವದಲ್ಲಿ ೧೫೦ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ. ಕೋಲಾರ ಜಿಲ್ಲೆಯ ೬ ಸ್ಥಾನಗಳ ಪೈಕಿ ಕನಿಷ್ಠ ೪ ಸ್ಥಾನವನ್ನಾದರೂ ಬಿಜೆಪಿ ಪಕ್ಷವು ಪಡೆಯಲಿದೆ ಎಂದು ಭವಿಷ್ಯ ನುಡಿದರು.ಬಿಜೆಪಿ ಪಕ್ಷವು ನರೇಂದ್ರ ಮೋದಿಯ ನಾಯಕತ್ವದಲ್ಲಿ ವಿಶ್ವದಲ್ಲೇ ನಂಬರ್ ಓನ್ ಸ್ಥಾನ ಪಡೆಯಲಿದೆ. ದೆಹಲಿಯ ಚುನಾವಣೆಯ ಫಲಿತಾಂಶವು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಗೌರವ ತಂದು ಕೊಟ್ಟಾಂತರಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾರ್ಗದರ್ಶನವನ್ನು ಪಡೆದಿರುವಂತ ಮೋದಿಜೀ ಮುಂದಿನ ದಿನಗಳಲ್ಲಿ ವಿಶ್ವದಲ್ಲಿಯೇ ದೊಡ್ಡಣ್ಣನ್ನಾಗಿ ಕೊಂಡೊಯ್ಯುವಂತ ಸಹನೆ, ತಾಳ್ಮೆ ಹಾಗೂ ಸಾಮರ್ಥ್ಯ ಇದ್ದು, ವಿಶ್ವದ ಅನೇಕ ದೇಶಗಳಿಗೆ ಮೋದಿಜೀ ಮಾರ್ಗದರ್ಶಕರಾಗಿ ಭಾರತದ ಘನತೆ ಮೆರೆಸಿದ್ದಾರೆ ಎಂದು ಶ್ಲಾಘಿಸಿದರು.
ಜನಪರ ಕಾರ್ಯಕ್ರಮ:ದೇಶದ ಮಹತ್ವವಾದ ಕುಂಭ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿಜೀ, ಅಮಿತ್‌ಷಾಜೀ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಫಲವು ದೆಹಲಿಯ ಚುನಾವಣೆಯ ಫಲಿತಾಂಶವಾಗಿದೆ. ಮುಂದಿನ ದಿನಗಳಲ್ಲಿ ಲೋಕ ಕಲ್ಯಾಣಕ್ಕಾಗಿ ಅನೇಕ ಜನಪರ ಕಾರ್ಯಕ್ರಮ ರೂಪಿಸಲು ದೆಹಲಿ ಫಲಿತಾಂಶವು ಶಕ್ತಿ ತುಂಬಲಿದೆ ಎಂದು ಅಭಿಪ್ರಾಯ ಪಟ್ಟರು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಮಾಜಿ ಉಪಾಧ್ಯಕ್ಷ ಕೆ.ವಿ.ಜಗದೀಶ್ವರಾಚಾರಿ, ಮುಖಂಡರಾದ ವಿಜಯಕುಮಾರ್, ಸಿ.ಡಿ.ರಾಮಚಂದ್ರ, ಹನುಮಂತಪ್ಪ, ಸಾಮ ಅನಿಲ್ ಬಾಬು, ಬೆಗ್ಲಿ ಸಿರಾಜ್‌ಪಾಷ, ಅಕ್ಬರ್ ಪಾಷ, ವೆಂಕಟೇಶ್, ಮಮತಮ್ಮ, ಅರುಣಮ್ಮ, ಪದ್ಮಮ್ಮ, ರಾಜೇಶ್ ಸಿಂಗ್, ನಟರಾಜ್, ರಾಜೇಶ್, ನಾಗೇಂದ್ರ, ಹೊಸರಾಯಪ್ಪ, ಹಾರೋಹಳ್ಳಿ ನಾರಾಯಣಸ್ವಾಮಿ, ಅಪ್ಪಿ ನಾರಾಯಣಸ್ವಾಮಿ, ಮಹೇಶ್ ಇದ್ದರು.