ಎಸ್‌ಐಆರ್ ನೆಪದಲ್ಲಿ ಬಿಜೆಪಿ 50 ವರ್ಷ ಅಧಿಕಾರದಲ್ಲಿರಲು ತಂತ್ರ

KannadaprabhaNewsNetwork |  
Published : Jun 19, 2026, 01:15 AM IST
ಫೋಟೋ ವಿವರಣೆ : ಶಿರಸಿಯಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದ ಎಸ್.ಐ.ಆರ್.ವಿರೋಧಿ ಜನಜಾಗೃತಿ ಜಾಥ ಉದ್ದೇಶಿಸಿ ನ್ಯಾಯವಾದಿ ಅನಿಸ್‍ಪಾಷ ಮಾತನಾಡಿದರು. | Kannada Prabha

ಸಾರಾಂಶ

ಅನಿಸ್‍ ಪಾಷ ಹೇಳಿಕೆ । ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮತದಾರರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇನ್ನೂ 50 ವರ್ಷಗಳ ಕಾಲ ಅಧಿಕಾರದಲ್ಲಿರಲು ತಂತ್ರಗಾರಿಕೆ ನಡೆಸುತ್ತಿದೆ ಎಂದು ನ್ಯಾಯವಾದಿ ದಾವಣಗೆರೆಯ ಅನಿಸ್‍ ಪಾಷ ತಿಳಿಸಿದರು.

ಶಿರಸಿಯಿಂದ ಚಿತ್ರದುರ್ಗಕ್ಕೆ ಗುರುವಾರ ಆಗಮಿಸಿದ್ದ ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗವನ್ನು ಹಿಡಿತದಲ್ಲಿಟ್ಟುಕೊಂಡಿರುವ ಬಿಜೆಪಿ, ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಎಸ್‌ಐಆರ್ ಮೂಲಕ ಲಕ್ಷಾಂತರ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಿದೆ.

40 ಇವಿಎಂ ಮೆಷಿನ್‍ಗಳನ್ನು ನಾಶಪಡಿಸಿದೆ. ನಿಜಕ್ಕೂ ಇದು ಪ್ರಜಾಪ್ರಭುತ್ವಕ್ಕೆ ಮಾರಕ. ನೈಜ ಮತದಾರರನ್ನು ಮತಪಟ್ಟಿಯಿಂದ ಡಿಲಿಟ್ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮತಪಟ್ಟಿಯಲ್ಲಿ ಎರಡೆರಡು ಕಡೆ ಇರುವ ಹೆಸರನ್ನು ತೆಗೆಯಲಿ, ಮೃತಪಟ್ಟವರ ಹೆಸರನ್ನು ಡಿಲಿಟ್ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ದುರುದ್ದೇಶದಿಂದ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಹೊರತೆಗೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರು ಬೇರೆ ಬೇರೆ ಸಂಘಟನೆಗಳ ಕಾರ್ಯಕರ್ತರು ಜಾಥದ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಜೆ.ಯಾದವರೆಡ್ಡಿ ಮಾತನಾಡಿ, ನುಸುಳುಕೋರರನ್ನು ಪತ್ತೆ ಹೆಚ್ಚುತ್ತೇವೆಂಬ ನೆಪದಲ್ಲಿ ಅರ್ಹ ಮತದಾರರಿಗೆ ಅನ್ಯಾಯ ಮಾಡಬಾರದು. ಎಸ್‌ಐಆರ್ ಮೇಲ್ನೋಟಕ್ಕೆ ಚೆನ್ನಾಗಿ ಕಾಣಬಹುದು. ಅಲ್ಪಸಂಖ್ಯಾತರು, ದಲಿತರು, ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಜಗತ್ತಿನ ಯಾವ ದೇಶದಲ್ಲಿಯೂ ಇಂತಹ ಕರಾಳತೆಯಿಲ್ಲ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‍ಕುಮಾರ್ ಆಯ್ಕೆ ಕೂಡ ಅಕ್ರಮ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮೂಲಕ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಡಿಲಿಟ್ ಮಾಡಿರುವ ಕಾರಣಕ್ಕಾಗಿ ಅಲ್ಲಿ ಕೋಮುವಾದಿ ಬಿಜೆಪಿ, ಅಧಿಕಾರ ಹಿಡಿದಿದೆ. ಘನಘೋರ ದುರಂತಕ್ಕೆ ಆಸ್ಪದ ಕೊಡಬಾರದು.

ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಎಚ್ಚರಿಸುವ ಉದ್ದೇಶದಿಂದ ಹೊರಟಿರುವ ಜಾಥಾ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜೂ.20ರಂದು ಸಮಾವೇಶ ನಡೆಸಲಿದೆ ಎಂದು ಹೇಳಿದರು.

ರೈತ ಮುಖಂಡ ಹೊರಕೇರಪ್ಪ ಮಾತನಾಡಿ, ಕೇಂದ್ರ ಸರ್ಕಾರ ಎಸ್‌ಐಆರ್‌ ಮೂಲಕ ನಾಗರೀಕರ ಮತವನ್ನು ಕಸಿಯಲು ಹೊರಟಿದೆ. ಪ್ರಜಾಪ್ರಭುತ್ವ ವಿರೋಧಿ ಕ್ರಮ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಅನೇಕ ಕಡೆ ಚಳುವಳಿಗಳು ನಡೆಯುತ್ತಿವೆ. ಕೋಮುವಾದಿ ಬಿಜೆಪಿ ಈಗಾಗಲೆ ಅನೇಕ ರಾಜ್ಯಗಳಲ್ಲಿ ಮತದಾರರ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನೆಪದಲ್ಲಿ ಅಧಿಕಾರ ಹಿಡಿದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ನೀಡಿರುವ ಮತದಾನದ ಹಕ್ಕನ್ನು ಸಂರಕ್ಷಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸುರೇಶ್‍ ನಾಯ್ಕ, ರಾಘವೇಂದ್ರ, ಶಿವಕುಮಾರ್, ಪುರುಷೋತ್ತಮ ತೋರಣಗಲ್, ಸಾಲೊಮನ್ ರಾಜ್‍ಕುಮಾರ್, ಅಶೋಕ, ಪವಿತ್ರ, ಬೈಲಮ್ಮ, ಪ್ರಭಾವತಿ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ವೀರೇಂದ್ರ ಹೆಗ್ಗಡೆಗೆ ಸಿದ್ಧಶ್ರೀ ಪ್ರಶಸ್ತಿ
ಮೊರಾರ್ಜಿ ವಸತಿ ಶಾಲೆಯ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ದೂರು