ಕನ್ನಡಪ್ರಭ ವಾರ್ತೆ ಬೆಳಗಾವಿ
ಎರಡೂ ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರ ಬರುತ್ತಿದೆ. ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಕ್ಸಿಟ್ ಪೋಲ್ ಫಲಿತಾಂಶದ ವ್ಯವಸ್ಥೆ ತೆಗೆದು ಹಾಕುವುದು ಉತ್ತಮ. ಹರ್ಯಾಣದಲ್ಲಿ ಎಕ್ಸಿಟ್ ಫೋಲ್ ಕಾಂಗ್ರೆಸ್ ಪರವಾಗಿ ಬಂದಿತ್ತು. ಆದರೆ ನೈಜ ಫಲಿತಾಂಶ ಬೇರೆ ಬಂದಿದೆ ಎಂದರು.
ಹರ್ಯಾಣ ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಅನುಮಾನ ಮಾಡುವುದು ಸರಿಯಲ್ಲ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಪರವಾಗಿತ್ತು. ಬಳಿಕ ಬಿಜೆಪಿ ಪರವಾಗಿ ಬಂದಿದೆ ಎನ್ನುವ ಆರೋಪ ಮಾಡುವುದು ಸರಿಯಲ್ಲ ಎಂದ ಅವರು, ಮುಂಬರುವ ಜಾರ್ಖಂಡ್, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಗೆ ಇದೇ ಫಲಿತಾಂಶ ಬರುವುದು ನಿಶ್ಚಿತ. ದೇಶದ ನಾಯಕತ್ವವನ್ನು ಜನರು ಮೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಬೇರೆ ಬೇರೆ ರಾಜ್ಯದ ಚುನಾವಣೆಯ ಫಲಿತಾಂಶದ ಮೇಲೂ ಈ ಚುನಾವಣೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ತನ್ನ ಪ್ರಾಬಲ್ಯವನ್ನು ಬಿಜೆಪಿ ಸಾಬೀತು ಮಾಡಿ ತೋರಿಸಿದೆ. ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ಫಲಿತಾಂಶ ದಾಖಲೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಇಷ್ಟಾದರೂ ರಾಜೀನಾಮೆ ಕೊಡುವಲ್ಲಿ ಸಿದ್ದರಾಮಯ್ಯ ಹಿಂದೆ ಮುಂದೆ ನೋಡುತ್ತಿದ್ದಾರೆ. ಯಾವಾಗ ರಾಜೀನಾಮೆ ಕೊಡಲಿ ಎಂದು ದಿನಾಂಕ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸತೀಶ್ ಜಾರಕಿಹೊಳಿ ಸಿಎಂ ಕೂಗು ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಯಾರಾಗಬೇಕು ಅಂತಾ ವೈಯಕ್ತಿಕವಾದ ಚರ್ಚೆಗೆ ನಾನು ಹೋಗಲ್ಲ. ಎಂಟತ್ತು ಜನರು ಈಗಾಗಲೇ ರೆಡಿ ಇದಾರೆ. ಅವರ ಪಾರ್ಟಿಗೆ ಬಿಟ್ಟ ವಿಚಾರ ಎಂದು ಹೇಳಿದರು.ಕಾಂಗ್ರೆಸ್‌ನಲ್ಲಿ ಈಗ ಅಲ್ಲಿ ನೆಗೆಟಿವ್ ಆಗಿದೆ. ಹೀಗಾಗಿ ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದು. ನವೆಂಬರ್ ಇಲ್ಲಾ ಡಿಸೆಂಬರ್‌ನಲ್ಲಿ ರಾಜೀನಾಮೆ ಆಗಬಹುದು. ಹೊಂದಾಣಿಕೆ ಆಗಿ ಮುಂದಿನ ಸಿಎಂ ಯಾರು ಅಂತಾ ನಿರ್ಧಾರ ಆದ ಮೇಲೆಯೂ ರಾಜೀನಾಮೆ ಆಗಬಹುದು. ಒಟ್ಟಿನಲ್ಲಿ ಅವರು ಸಿಎಂ ಸ್ಥಾನದಿಂದ ಇಳಿಯುವುದು ನಿಶ್ಚಿತ. ಅವರಾಗಿಯೇ ಇಳಿದು ಗೌರವಯುತವಾಗಿ ಹೊರಬಂದು ನಾನು ಹೇಳಿದವರನ್ನು ಮುಖ್ಯಮಂತ್ರಿ ಮಾಡಿ ಅಂದರೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅವರು ಹೇಳಿದವರು ಆಗುವುದಿಲ್ಲ ಎಂದು ಹೇಳಿದರು.-----------ಕಾಂಗ್ರೆಸ್ ನಾಯಕರು ಹೊರಗಡೆ ಸಿದ್ದರಾಮಯ್ಯ ಪರವಾಗಿ ಮಾತನಾಡುತ್ತಾರೆ. ಒಳಗಡೆ 10 ನಾಯಕರು ಸಿಎಂ ಆಗಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಇವರೇ ಸಿಎಂ ಆಗಿ ಮಾಡಿ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದರೆ ಅವರಿಗೆ ಗೌರವ ಸಿಗುತ್ತದೆ. ಇಲ್ಲದಿದ್ದರೇ, ಹೀನಾಯ ಪರಿಸ್ಥಿತಿ ಎದುರಾಗುತ್ತದೆ.
- ಜಗದೀಶ ಶೆಟ್ಟರ್, ಮಾಜಿ ಸಿಎಂ, ಸಂಸದ